

ಲಿಂಗಸುಗೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಎಲ್ಲರೂ ಸಂಕಲ್ಪ ಮಾಡಬೇಕೆಂದು ಎಸಿ ಅವಿನಾಶ ಶಿಂಧೆ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭಾನುವಾರ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗ ಸ್ಥಳೀಯರ ಹೋರಾಟ ಮತ್ತು ಅಂದಿನ ಕೇಂದ್ರ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮಧ್ಯಸ್ಥಿಕೆಯಲ್ಲಿ ನಿಜಾಮರ ಕಪಿಮುಷ್ಠಿಯಿಂದ ವಿಮೋಚನೆಗೊಂಡರೂ, ಈ ಭಾಗವು ಸಮಗ್ರ ಅಭಿವೃದ್ಧಿಯಿಂದ ಹಿಂದುಳಿದಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಕಲಂ 371(ಜೆ) ಜಾರಿಯಿಂದ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಏಳಿಗೆ ಹೊಂದಲು ಸಹಕಾರಿಯಾಗಿದ್ದು, ಈ ಭಾಗದ ಜನತೆ ಸರ್ಕಾರಗಳ ಸವಲತ್ತುಗಳ ಸದುಪಯೋಗ ಪಡೆದುಕೊಂಡು ಪ್ರಾದೇಶಿಕ ಅಸಮತೋಲನ ನಿವಾರಿಸಲು ಆಸಕ್ತಿ ತೋರಬೇಕೆಂದು ಅವಿನಾಶ ಶಿಂಧೆ ಹೇಳಿದರು. ಬಿಇಒ ಹುಂಬಣ್ಣ ರಾಠೋಡ್, ಜಿಪಂ ಎಇಇಗಳಾದ ಶಿವಕುಮಾರ, ರಂಗಪ್ಪ, ಪಿಡಬ್ಲ್ಯುಡಿ ಎಇಇ ಗೋಪಾಲರಡ್ಡಿ ಇತರರು ಇದ್ದರು.