

ಬದಿಯಡ್ಕ: ಹರಿಕಥಾ ಪರಿಷತ್ ಮಂಗಳೂರು ಹಾಗೂ ಮಂಗಳೂರಿನ ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಜಂಟಿ ಆಶ್ರಯದಲ್ಲಿ, ಅವಿಭಜಿತ ದ.ಕ ಹಾಗೂ ಕಾಸರಗೋಡು ಜಿಲ್ಲಾಮಟ್ಟದ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ’ಹರಿಕಥಾ ಸ್ಪರ್ಧೆ-24’ ಜರುಗಿತು. ಕಿರಿಯ ವಿಭಾಗದಲ್ಲಿ ಐದರಿಂದ ಹತ್ತನೇ ತರಗತಿಯ ತನಕದ ಮಕ್ಕಳು ಹಾಗೂ ಹಿರಿಯ ವಿಭಾಗದಲ್ಲಿ ಪಿಯುಸಿಯಿಂದ ಡಿಗ್ರಿ ತನಕದ ಮಕ್ಕಳು ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 16 ಮಂದಿ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಕಿರಿಯ ಹಾಗೂ ಹಿರಿಯ ವಿಭಾಗದ ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ ಒಟ್ಟು ಆರು ಪ್ರಶಸ್ತಿಗಳನ್ನು ಕುಂಬಳೆಯ ಕಲಾರತ್ನ ಶಂನಾಡಿಗ ಕುಂಬ್ಳೆ ನಿರ್ದೇಶನದ ಕೀರ್ತನ ಕುಟೀರದ ಸ್ಪರ್ಧಾಳುಗಳು ಬಗಲಿಗೇರಿಸಿಕೊಂಡು ದಾಖಲೆ ನಿರ್ಮಿಸಿದರು.
ಹಿರಿಯ ವಿಭಾಗದಲ್ಲಿ ಪೂಜಾ ವಾಸುದೇವ ಐಲ (ಪ್ರಥಮ), ನಿಶ್ವಿತ ಕೃಷ್ಣ ಭಟ್ ಅಡೂರು (ದ್ವಿತೀಯ) ಹಾಗೂ ಅಭಿಜ್ಞಾ ಭಟ್ ಬೊಳುಂಬು (ತೃತೀಯ) ಸ್ಥಾನ, ಕಿರಿಯ ವಿಭಾಗದಲ್ಲಿ ಪ್ರಣಮ್ಯ ಕೆ.ಎಸ್.ನಾಯ್ಕಪು (ಪ್ರಥಮ), ದೇವಿಕಾ ಕೆ. ಪುತ್ತೂರು (ದ್ವಿತೀಯ), ಹಾಗೂ ಸಾತ್ವಿಕ್ ಕೃಷ್ಣ ತುಂಗ, ಬಂದ್ಯೋಡು (ತೃತೀಯ) ಸ್ಥಾನ ಪಡೆದು ಕೊಂಡಿದ್ದಾರೆ. ವಿಜೇತರೆಲ್ಲರೂ ಕಲಾರತ್ನ ಶಂನಾಡಿಗ ಕುಂಬ್ಳೆ ಇವರ ಶಿಷ್ಯರಾಗಿದ್ದಾರೆ.
ಜ.19ರಂದು ಮಂಗಳೂರಿನ ಮಂಗಳಾ ದೇವಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆಯಲಿರುವ ಹರಿಕಥಾ ಸಮ್ಮೇಳನದ ವೇಳೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯ ನಡೆಯಲಿರುವುದು.