ಕಲ್ಯಾಣ, ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಸಮಗ್ರ ನೆರವು: 2,667 ಕೋಟಿ ರೂಪಾಯಿ ಯೋಜನೆಗೆ ಸಂಪುಟ ಅನುಮೋದನೆ..

Belagavi
Published on

ಬೆಳಗಾವಿ: ಬೆಳಗಾವಿ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಬಸವರಾಜ ಬೊಮ್ಮಾಯಿ ಸಂಪುಟವು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕವನ್ನೊಳಗೊಂಡ ಸಮಗ್ರ ಕರ್ನಾಟಕಕ್ಕೆ ಭರಪೂರ ನೆರವು ಹರಿಸುವ ತೀರ್ಮಾನ ಕೈಗೊಂಡಿದೆ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ನೀರಾವರಿ, ರೈಲ್ವೆ, ಕುಡಿಯುವ ನೀರು ಸೇರಿದಂತೆ ಮೌಲಸೌಕರ್ಯ ಸಂಬಂಧ ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಸರಿಸುಮಾರು 2667 ಕೋಟಿ ರೂ. ಮೊತ್ತದ ಯೋಜನೆಗೆ ಅನುಮತಿಸಲಾಗಿದೆ.

ವಿಧಾನಸಭೆ ಅಧಿವೇಶನ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಸರ್ಕಾರ ತೀರ್ವನವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿಲ್ಲ. ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ, ಧಾರವಾಡ, ಕಿತ್ತೂರು, ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣ (73 ಕಿಮೀ)ಕ್ಕೆ 927.40 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ಹಾವೇರಿ ಜಿಲ್ಲೆಯ ಹಾವೇರಿ, ಸವಣೂರು, ಶಿಗ್ಗಾವ್ ಮತ್ತು ಹಾನಗಲ್ ತಾಲೂಕುಗಳ 285 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು 645 ಕೋಟಿ ರೂ. ವೆಚ್ಚದಲ್ಲಿ ಡಿಬಿಒಟಿ ಆಧಾರದ ಮೇಲೆ ಅನುಷ್ಠಾನಕ್ಕೆ ಅನುಮತಿ ನೀಡಲಾಗಿದೆ.

ದ್ರಾಕ್ಷಿ ಹೆಚ್ಚಾಗಿ ಬೆಳೆಯುವ ಪ್ರದೇಶಕ್ಕೆ ಪ್ರೋತ್ಸಾಹ ನೀಡಲು ವೈನ್ ಬೋರ್ಡ್ ವ್ಯಾಪ್ತಿ ವಿಸ್ತರಿಸಲು ತೀರ್ವನಿಸಲಾಗಿದೆ. ಕರ್ನಾಟಕ ವೈನ್ ಬೋರ್ಡ್ ಅನ್ನು ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಎಂಬುದಾಗಿ ಪುನಾರಚನೆ ಮಾಡುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನಂತೆ ಪ್ರಾದೇಶಿಕ ಅಸಮತೋಲನ ನಿವಾರಿಸಲು ಜಾರಿಯಲ್ಲಿರುವ ವಿಶೇಷ ಅಭಿವೃದ್ಧಿ ಯೋಜನೆಯನ್ನು ಪ್ರಾದೇಶಿಕ ಸಮತೋಲನ ಯೋಜನೆ ಎಂದು ಮರುನಾಮಕರಣ ಮಾಡಿ ಅನುಷ್ಠಾನ, ನೀತಿ ಆಯೋಗ ಸೂಚಿಸಿರುವ 49 ಸೂಚಕಗಳ ಅಳವಡಿಕೆ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅನುಷ್ಠಾನಗೊಳಿಸುತ್ತಿರುವ ಸುರಪುರ, ಶಹಪುರ ಮತ್ತು ತಾವರಗೆರೆ ಪಟ್ಟಣಗಳ ಕುಡಿಯುವ ನೀರಿನ ಯೋಜನೆಗಳ ಒಟ್ಟಾರೆ 381.87 ಕೋಟಿ ರೂ. ಪರಿಷ್ಕೃತ ಯೋಜನೆ, ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಾಗಿಣಾ ನದಿಯಿಂದ ನೀರೆತ್ತಿ 3,150 ಹೆಕ್ಟೇರ್​ಗೆ ನೀರಾವರಿ ಸೌಲಭ್ಯ ಕಲ್ಪಿಸುವ 143.80 ಕೋಟಿ ರೂ. ಹೆಡ್ಡಳ್ಳಿ ಮತ್ತು ತೆರ್ನಳ್ಳಿ ಏತ ನೀರಾವರಿ ಯೋಜನೆಗೆ ಅಸ್ತು ಎನ್ನಲಾಗಿದೆ. ಆಲಮಟ್ಟಿ ಎಡದಂಡೆ ಕಾಲುವೆಯ ಕಿಲೋ ಮೀಟರ್ ಶೂನ್ಯದಿಂದ 68.24ರವರೆಗೆ ಬಾಕಿ ಉಳಿದ ಕಾಲುವೆ ಜಾಲ ಹಾಗೂ ವಿತರಣಾ ಕಾಲುವೆಗಳ ಸ್ಟ್ರಕ್ಚರ್ ಒಳಗೊಂಡು ಆಧುನೀಕರಣ ಕಾಮಗಾರಿಗೆ 75.41 ಕೋಟಿ ರೂ. ಮತ್ತು ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ತಳಬಾಳು ಗ್ರಾಮದ ವಿವಿಧ ಸರ್ವೆ ನಂಬರ್​ಗಳಲ್ಲಿನ ಒಟ್ಟು 26.20 ಎಕರೆ ಪಟ್ಟಾ ಜಮೀನಿನ ಬದಲಾಗಿ ಅದೇ ಗ್ರಾಮದ ಒಟ್ಟು 24.21 ಎಕರೆ ಸರ್ಕಾರಿ ಜಮೀನನ್ನು ಏಕಸ್ ಎಸ್​ಇಝೆಡ್ ಕಂಪನಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಮಂಜೂರು ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಸಂಪುಟದ ಇತರ ವಿಚಾರ

  • ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶರಯ್ಯ ಇಂಜಿನಿಯರಿಂಗ್ ಕಾಲೇಜು ಮೆಕಾನಿಕಲ್ ವಿಭಾಗದ ಹೊಸ ಕಟ್ಟಡ ನಿರ್ವಣಕ್ಕೆ -ಠಿ;85 ಕೋಟಿ
  • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಚೆಸ್ಕಾಂ) ಹಣಕಾಸು ಸ್ಥಿತಿಗತಿ ಸುಧಾರಣೆಗಾಗಿ ಸಾಲದ ಪುನಾರಚನೆ, ಬಡ್ಡಿ ರಹಿತ ಸಾಲಗಳನ್ನು ಷೇರು ಬಂಡವಾಳವಾಗಿ ಪರಿವರ್ತನೆ.
  • ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹೆಚ್ಚುವರಿ ಯಾಗಿ -ಠಿ;50 ಕೋಟಿ ಷೇರು ಬಂಡವಾಳ.
  • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) 2021 ವಿಧೇಯಕಕ್ಕೆ ಅನುಮೋದನೆ.
  • 2022-22ನೇ ಸಾಲಿನ ಐಇಬಿಆರ್ ಅಡಿಯಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಅವಧಿ ಸಾಲಗಳ ಮೂಲಕ 650 ಕೋಟಿ ರೂ. ಎತ್ತುವಳಿಗೆ ಸರ್ಕಾರಿ ಖಾತ್ರಿ. ಇದೇ ಯೋಜನೆಯಡಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 250 ಕೋಟಿ ರೂ., ಕಾವೇರಿ ನೀರಾವರಿ ನಿಗಮಕ್ಕೆ 250 ಕೋಟಿ ರೂ., ಕೃಷ್ಣ ಭಾಗ್ಯ ಜಲ ನಿಗಮಕ್ಕೆ 500 ಕೋಟಿ ರೂ. ಸಂಗ್ರಹಿಸಲು ಸರ್ಕಾರದ ಖಾತ್ರಿ.
  • ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯಲ್ಲಿರುವ ಹೇಮಾವತಿ ಬಡಾವಣೆ ಮತ್ತು ಟಿಬಿ ಬಡಾವಣೆಯಲ್ಲಿನ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮಗಳ ಬಗ್ಗೆ ಲೋಕಾಯುಕ್ತರು ಸಲ್ಲಿಸಿದ ವರದಿ ಬಗ್ಗೆ ತೀರ್ವನ.
  • ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ.

ಎರಡು ಪ್ರಮುಖ ಯೋಜನೆ

ಸಾಸಲಟ್ಟಿ ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಳಂಗಳಿ ಗ್ರಾಮ ಬಳಿ ಕೖಷ್ಣ ನದಿಯ ನೀರನ್ನು ಎತ್ತುವಳಿ ಮಾಡಿ ಘಟಪ್ರಭಾ ಎಡದಂಡೆ ಕಾಲುವೆಯ ಬಾಧಿತವಾಗಿರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ಸಸಾಲಹಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಗೆ 266 ಕೋಟಿ ರೂ.ಗಳ ವಿಸ್ತೖತ ಯೋಜನಾ ವರದಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆ ಕಾರ್ಯಗತವಾದರೆ 19,128.50 ಹೆಕ್ಟೇರ್ ಭೂಮಿಗೆ ನೀರುಣಿಸಲಾಗುವುದು. ಜಮಖಂಡಿ ತಾಲೂಕಿನ ಗಲಗಲಿ ಗ್ರಾಮದ ಬಳಿ ಕೖಷ್ಣ ನದಿ ನೀರನ್ನು ಎತ್ತುವಳಿ ಮಾಡುವ ಮೂಲಕ ಬೀಳಗಿ ಶಾಖಾ ಕಾಲುವೆ ಮತ್ತ್ತು ದಕ್ಷಿಣಶಾಖಾ ಕಾಲುವೆ ಸೇರಿದಂತೆ ಘಟಪ್ರಭಾ ಎಡದಂಡೆ ಕಾಲುವೆ ಈ ಬಾಧಿತವಾಗಿರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು 228 ಕೋಟಿ ರೂ. ವೆಚ್ಚದ ಮಂಟೂರು ಮಾಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ವಿಸõತ ವರದಿಗೆ ಅನುಮೋದನೆ ನೀಡಲಾಗಿದೆ.

ನವೋದ್ಯಮ ಪ್ರೋತ್ಸಾಹಕ್ಕೆ ನಿಧಿ

ನವೋದ್ಯಮ ಪ್ರೋತ್ಸಾಹಿಸಲು ಹೊಸ ನವೋದ್ಯಮ ಬಂಡವಾಳ ನಿಧಿ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಕೃತಕ ಬುದ್ಧಿಮತ್ತೆ, ಯಾಂತ್ರೀಕೃತ ಕಲಿಕೆ, ವಿದ್ಯುತ್ ಚಾಲಿನ ವಾಹನಗಳು, ವೈದ್ಯತಂತ್ರಜ್ಞಾನ ವಲಯಗಳ ಉದಯೋನ್ಮುಖ ನಾವೀನ್ಯತೆಯುಳ್ಳ ಮತ್ತು ತೀವ್ರ ತಾಂತ್ರಿಕ ನವೋದ್ಯಮ ಕಂಪನಿಗಳು, ಸರ್ವ ವಲಯಗಳಲ್ಲಿನ ಇತರ ಕ್ರಾಂತಿಕಾರಕ ತಂತ್ರಜ್ಞಾನಗಳನ್ನು ಬೆಂಬಲಿಸಲು 3 ಕೋಟಿ ರೂ.ಗಳ ನಿಧಿ ಸ್ಥಾಪಿಸಲಾಗುತ್ತಿದೆ.

ಕೆಪಿಎಸ್​ಸಿ ನೇಮಕ ಅಕ್ರಮ-ಸಕ್ರಮ ಮುಂದಕ್ಕೆ?

ಕರ್ನಾಟಕ ಲೋಕಸೇವಾ ಆಯೋಗದ 2011ರ ಗೆಜೆಟೆಡ್ ಪ್ರೊಬೆಷನರಿ ಬ್ಯಾಚ್ ವಿವಾದಕ್ಕೆ ತೆರೆ ಎಳೆಯುವ ವಿಷಯದಲ್ಲಿ ಸರ್ಕಾರ ಇನ್ನೊಂದು ಸ್ವಲ್ಪ ಕಾಲ ಕಾದು ನೋಡುವ ತೀರ್ವನಕ್ಕೆ ಬಂದಂತಿದೆ. 2011ರಲ್ಲಿ ನಡೆದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಬಳಿಕ ತನಿಖೆ ನಡೆದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಪರೀಕ್ಷೆ ಪ್ರಕ್ರಿಯೆಯಲ್ಲಿ ಅಕ್ರಮವಾಗಿದ್ದರಿಂದ ಕೋರ್ಟ್ ಆಯ್ಕೆ ಪಟ್ಟಿಯನ್ನು ತಡೆ ಹಿಡಿದಿತ್ತು. ಇಷ್ಟರ ನಡುವೆ, ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದ್ದರಿಂದ ಆ ಪಟ್ಟಿಯನ್ನು ಸಕ್ರಮಗೊಳಿಸಲು ಆಸಕ್ತಿ ತೋರಿಸಿದೆ. ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ, ಈ ವಿಚಾರವನ್ನು ಸಂಪುಟದ ಮುಂದೆ ಮಂಡಿಸಲು ಸಿಎಂ ಕಡತಕ್ಕೆ ಸಹಿ ಮಾಡಿದ್ದರು. ಜವಾಬ್ದಾರಿ ಹೊತ್ತ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯುವ ಇನ್ನಷ್ಟು ಕಾಲಾವಕಾಶ ಕೇಳಿದ್ದರಿಂದ ಮುಂದಿನ ಬಾರಿ ಸಂಪುಟದಲ್ಲಿ ಚರ್ಚೆ ನಡೆಸಲು ತೀರ್ವನಿಸಲಾಯಿತೆಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net