ಸೌಲಭ್ಯದಿಂದ ಯುವಜನತೆ ಕಾಣಲಿ ಅಭಿವೃದ್ಧಿ ಮಾರ್ಗ

Krushi
Published on

ಸಿಇಒ ಜ್ಯೋತಿರಾಜ್​ ಸಲಹೆ

ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಂಗಳೂರಿನ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನವು ಬ್ಯಾಂಕ್​ ಆಫ್​ ಬರೋಡಾ ಸಂಯೋಜನೆಯೊಂದಿಗೆ ಕೃಷಿ, ಪರಿಸರ, ಆರೋಗ್ಯ ಕ್ಷೇತ್ರದ ಏಳಿಗೆಯಲ್ಲಿ ತೊಡಗಿದೆ. ಕುಶಲಕರ್ಮಿಗಳು ಸೇರಿದಂತೆ ಇನ್ನಿತರ ಗ್ರಾಮೀಣರ ಬದುಕು ಹಸನಾಗಲು ಮಾಹಿತಿ, ತರಬೇತಿ ಮೂಲಕ ಸಹಕಾರ ನೀಡುತ್ತಿದೆ. ಇಂತಹ ಸಂಸ್ಥೆಗಳು ನೀಡುವ ಸೌಲಭ್ಯ ಸಮರ್ಪಕವಾಗಿ ಬಳಸಿಕೊಂಡು ಯುವಜನತೆ ಅಭಿವೃದ್ಧಿಯ ದಾರಿ ಕಂಡುಕೊಳ್ಳಬೇಕು ಎಂದು ಪ್ರತಿಷ್ಠಾನದ ಸಿಇಒ ಜ್ಯೋತಿರಾಜ್​ ಸಲಹೆ ನೀಡಿದರು.

ಉಡುಪಿ ಜಿಲ್ಲಾ ಕೃಷಿಕ ಸಂಘದ ಕರಂಬಳ್ಳಿ ವಲಯ ಸಮಿತಿ, ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.) ಕರಂಬಳ್ಳಿ ವಲಯ ಘಟಕ, ಕರಂಬಳ್ಳಿ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಕರಂಬಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ಜುಲೈ 20ರಂದು ಆಯೋಜಿಸಿದ್ದ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕೆ.ರಘಪತಿ ಭಟ್​ ಹಾಗೂ ದೇವಸ್ಥಾನದ ಅರ್ಚಕ ದಿವಾಕರ ಐತಾಳ ಶುಭ ಹಾರೈಸಿದರು. ಬ್ರಾಹ್ಮಣ ಸಮಿತಿಯ ಅಧ್ಯಕ್ಷ ಕೃಷ್ಣರಾಜ ಭಟ್​, ಪ್ರಗತಿಪರ ಕೃಷಿಕ ಶಶಿಧರ ರಾವ್​ ಪೆರಂಪಳ್ಳಿ ಮಾತನಾಡಿದರು.

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ, ಪ್ರ.ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್​ ಉಪನ್ಯಾಸ ನೀಡಿ, ಇರುವ ಜಮೀನಿನ ಮಿತಿಯಲ್ಲೇ ಕಡಿಮೆ ಪ್ರಮಾಣದ ಶ್ರಮ, ನೀರು, ಗೊಬ್ಬರ ಬಳಸಿ ತಂಗು, ಅಡಕೆ, ಬಾಳೆ ಮತ್ತು ಮಲ್ಲಿಗೆ ಕೃಷಿಯ ಮಾಹಿತಿ ನೀಡಿದರು. ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ ಮಲ್ಲಂಪಳ್ಳಿ, ಕೃಷಿಕ ಸಂಘ ಪೆರಂಪಳ್ಳಿ ವಲಯದ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಅವರು ಭತ್ತ ಮತ್ತು ಹೈನುಗಾರಿಕೆಯ ಮಾಹಿತಿ ನೀಡಿದರು.

ಕೃಷಿ ಸಾಧಕರಿಗೆ ಸನ್ಮಾನ

ಕರಂಬಳ್ಳಿಯ ಪ್ರಗತಿಪರ ಕೃಷಿಕರಾದ ಸತೀಶ ಶೆಟ್ಟಿ, ರಘುರಾಮ ಶೆಟ್ಟಿ, ಚಂದ್ರಶೇಖರ ನಾಯ್ಕ, ಬಾಲಚಂದ್ರ ಕೆ. ಮತ್ತು ಕಮಲಾ ಪಾಟೀಲ ದೊಡ್ಡಣಗುಡ್ಡೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ತೆಂಗು, ಅಡಕೆ, ಬಾಳೆ, ಕಾಫಿ, ಲಕ್ಷ್ಮಣ ಫಲ ಸೇರಿದಂತೆ ವಿವಿಧ ಗಿಡ ವಿತರಿಸಲಾಯಿತು. ನಾಗರಾಜ ಭಟ್​, ರಮೇಶ ಬಂಗೇರ, ಆಶಾ ಭಟ್​ ಇತರರು ಸಹಕರಿಸಿದರು.

ಲಕ್ಷ್ಮೀ ಕರಂಬಳ್ಳಿ ಪ್ರಾರ್ಥಿಸಿದರು. ಪ್ರಿಯಂವದಾ ಐತಾಳ ಸ್ವಾಗತಿಸಿದರು. ಜಿಲ್ಲಾ ಕೃಷಿಕ ಸಂಘದ ಕರಂಬಳ್ಳಿ ವಲಯಾಧ್ಯಕ್ಷ ಕೆ. ಶ್ರೀಪತಿ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಾಥ ಸಾಮಗ ವಂದಿಸಿದರು. ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net