ಯೂರಿಯಾಗೆ ಹೆಚ್ಚಿದ ಬೇಡಿಕೆ

Untitled design(7)
Published on

ಗಂಗಾವತಿ; ಇಳುವರಿ ಪೂರಕವಾದ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದೆ. ಪರ್ಯಾಯ ರಾಸಾಯನಿಕ ಗೊಬ್ಬರ ಬಳಕೆಗೆ ಇಲಾಖೆಯ ಚಿಂತನೆಗೆ ರೈತರು ಒಪ್ಪುತ್ತಿಲ್ಲ.

ತಾಲೂಕಿನ ಗಂಗಾವತಿ, ಮರಳಿ, ವೆಂಕಟಗಿರಿ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿಗೆ 25,276.44 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ, ಬೋರವೆಲ್ ಸೇರಿ ಇತರೆ ನೀರಾವರಿ ಮೂಲಗಳಿಂದ 22,109 ಹೆಕ್ಟೇರ್ ಏಕದಳ ಬೆಳೆ ಆಯ್ಕೆ ಮಾಡಿಕೊಂಡಿದ್ದು, ಭತ್ತಕ್ಕೆ ಅಗ್ರಸ್ಥಾನವಿದೆ. 20,509 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ರೋಹಿಣಿ ಮಳೆ ನಂತರ ಭೂಮಿ ಹದ ಪೂರ್ಣಗೊಂಡಿದ್ದು, ಸಸಿ ಮಡಿಯೂ ಕೈಗೆ ಬಂದಿದೆ. ಕಾಲುವೆಗೆ ನೀರು ಹರಿಸುವ ಮುನ್ನವೇ ಶೇ.40 ಬಿತ್ತನೆಗೆ ಚಾಲನೆ ನೀಡಲಾಗಿದೆ. ನೀರಾವರಿ ಸಲಹಾ ಸಮಿತಿ ಸಭೆ ಜೂ.27ಕ್ಕೆ ನಿಗದಿಯಾಗಿದ್ದು, ತುಂಗಭದ್ರಾ ಜಲಾಶಯಕ್ಕೆ ನಿರೀಕ್ಷಿತ ನೀರಿನ ಹರಿವು ಬಂದಿದ್ದರಿಂದ ಜೂನ್ ಕೊನೇ ವಾರದಿಂದಲೇ ಎಡದಂಡೆ ಕಾಲುವೆಗೆ ನೀರು ಹರಿಸುವ ಸಾಧ್ಯತೆಗಳಿವೆ.

===============

ನ್ಯಾನೋ ಬಳಕೆಗೆ ಒತ್ತಡ

ಸಸಿಮಡಿ ಹಂತದಿಂದಲೇ ಯೂರಿಯಾ ಗೊಬ್ಬರ ಅಗತ್ಯವಿದ್ದು, 11 ಸಾವಿರ ಮೆಟ್ರಿಕ್ ಟನ್ ಗೊಬ್ಬರದ ಅಗತ್ಯವಿದೆ. ಭತ್ತ ಅವಲಂಬಿತ ಪ್ರದೇಶದಲ್ಲಿ ಪಿಎಸ್ಸೆಸ್ಸೆನ್ ನಲ್ಲಿ 613 ಮೆಟ್ರಿಕ್ ಟನ್, ರಿಟೇಲರ್‌ನಲ್ಲಿ 4949 ಮೆ.ಟನ್ ಯೂರಿಯಾ ಗೊಬ್ಬರದ ದಾಸ್ತಾನವಿದ್ದು, ಶೇ.40 ಗೊಬ್ಬರದ ಕೊರತೆ ಎದುರಾಗುತ್ತಿದ್ದು, ನಿಯಮಾವಳಿಯಂತೆ ರಿಟೇಲ್‌ರಲ್ಲಿ ಗೊಬ್ಬರದ ಮಾರಾಟವಾಗುತ್ತಿಲ್ಲ. ಪರ್ಯಾಯ ಗೊಬ್ಬರ ಬಳಕೆ ಸರ್ಕಾರದ ನೀತಿಯಂತೆ ರೈತರ ಬೇಡಿಕೆ ಅನುಗುಣ ಯೂರಿಯಾ ದೊರೆಯವುದು ಅನುಮಾನ ನೀರು ಕಾಲುವೆಗೆ ಹರಿಸುವಷ್ಟರಲ್ಲಿ ಶೇ.50 ಯೂರಿಯಾದ ಅಗತ್ಯವಿದ್ದು, ನ್ಯಾನೋ ಗೊಬ್ಬರ ಬಳಕೆಗೆ ಒತ್ತಡ ಹೆಚ್ಚುತ್ತಿದೆ. ಸಂಯುಕ್ತ ರಸಗೊಬ್ಬರ ಬಳಕೆಗೆ ಕೃಷಿ ಇಲಾಖೆ ಜಾಗೃತಿ ಮೂಡಿಸುತ್ತಿದ್ದರೂ, ರೈತರ ಚಿತ್ತ ಮಾತ್ರ ಯೂರಿಯಾ ಗೊಬ್ಬರದ ಮೇಲಿದೆ.

=============

ಭೂಮಿ ಲವತ್ತತೆ ಹಾಳು

ಅತಿಯಾದ ಯೂರಿಯಾ ಬಳಕೆಯಿಂದ ನೀರಾವರಿ ಭೂಮಿ ಲವತ್ತತೆ ಕಳೆದುಕೊಳ್ಳುತ್ತಿದ್ದು, ಸವಳು ಪ್ರಮಾಣ ಹೆಚ್ಚಾಗುತ್ತಿದೆ. ತಜ್ಞರ ವರದಿಯಂತೆ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ನೀರಾವರಿ ಕೃಷಿ ಭೂಮಿ ಲವತ್ತತೆ ಕಳೆದುಕೊಳ್ಳುತ್ತಿದೆ. ಇದೇ ಕಾರಣಕ್ಕೆ ಯೂರಿಯಾ ಗೊಬ್ಬರ ಬದಲಾಗಿ ಸಂಯುಕ್ತ ರಾಸಾಯನಿಕ ಬಳಕೆಗೆ ಗಮನಹರಿಸಿ ಎನ್ನುವುದು ಕೃಷಿ ಇಲಾಖೆ ವಾದ. ಕಡಿಮೆ ಅವಧಿ, ಅಧಿಕ ಇಳುವರಿಗೆ ಯೂರಿಯಾ ಗೊಬ್ಬರವೇ ಕೊಡಿ ಎನ್ನುವುದು ರೈತರ ಬೇಡಿಕೆ. ಸಂಯುಕ್ತ ಗೊಬ್ಬರ ಬಳಕೆ ನೆಪದಲ್ಲಿ ಮಾರಾಟಗಾರರು ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ರೈತರು ಆರೋಪ. ಜನರಿಗೆ ಪೌಷ್ಟಿಕ ಅಕ್ಕಿ ಬದಲಾಗಿ ಯೂರಿಯಾ ತಿನ್ನಿಸಿಬೇಡಿ ಎಂದು ಕೃಷಿ ತಜ್ಞರ ಮನವಿಗೆ ರೈತರು ಒಪ್ಪುತ್ತಿಲ್ಲ. ಯೂರಿಯಾ ಗೊಬ್ಬರವೇ ಬೇಕೆನ್ನುತ್ತಿರುವುದರಿಂದ ಕೃಷಿ ಇಲಾಖೆಗೆ ಸಂಕಷ್ಟ ಎದುರಾಗಿದೆ.

===============

ಭತ್ತಕ್ಕೆ ಅಂಟಿಕೊಂಡ ರೈತರು

ತಾಲೂಕಿನ ಮೂರು ಹೋಬಳಿಯಲ್ಲಿ 18 ಮಳೆಮಾಪನ ಕೇಂದ್ರವಿದ್ದು, ಸರಾಸರಿ 627 ಮಿ.ಮೀ. ವಾಡಿಕೆ ಮಳೆಯಿದೆ. ಇದುವರಿಗೂ ಸರಾಸರಿ ಅತಿ ಹೆಚ್ಚು 54 ಮಿ.ಮೀ.ಮಳೆಯಾಗಿದೆ. ಪ್ರಸಕ್ತ ಸಾಲಿನ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಕೃಷಿ ಚಟುವಟಿಕೆ ತೀವ್ರಗೊಳ್ಳಲಿದೆ. ಜುಲೈ 2ನೇ ವಾರದೊಳಗೆ ರೈತರ ಬೇಡಿಕೆಯಂತೆ ಯೂರಿಯಾ ದಾಸ್ತಾನ ಆಗಬೇಕು ಇಲ್ಲವೇ, ಸಂಯುಕ್ತ ರಾಸಾಯನಿಕ ಗೊಬ್ಬರ ಬಳಕೆಗೆ ರೈತರು ಸಿದ್ಧರಾಗಬೇಕು. ಭೂಮಿ ಲವತ್ತತೆಗಿಂತ ಆದಾಯ ಮುಖ್ಯ ಎನ್ನುವ ರೈತರ ನಿರ್ಧಾರಕ್ಕೆ ಕೃಷಿ ಇಲಾಖೆ ಅಧಿಕಾರಿಗಳಲ್ಲಿ ಮೌನವೊಂದೇ ಉತ್ತರ. ಭತ್ತಕ್ಕೆ ಅಂಟಿಕೊಂಡ ರೈತರು ಪರ್ಯಾಯ ಬೆಳೆಯತ್ತ ಗಮನಹರಿಸುವ ದಿನಗಳು ಬರಬೇಕಿದೆ.

===============

ಕೋಟ್

ರೈತರ ಬೇಡಿಕೆಯಂತೆ ಯೂರಿಯಾ ಗೊಬ್ಬರ ಒದಗಿಸಲು ಕೃಷಿ ಇಲಾಖೆ ಸಿದ್ಧವಿದ್ದು, ಆದರೆ ಸಂಯುಕ್ತ ರಾಸಾಯನಿಕ ಗೊಬ್ಬರ ಬಳಕೆಗೆ ಸರ್ಕಾರ ಒತ್ತು ನೀಡಿದೆ. ಭೂಮಿ ಲವತ್ತತೆ ಉಳಿಸಿಕೊಳ್ಳಲು ಸಂಯುಕ್ತ ರಾಸಾಯನಿಕ ಗೊಬ್ಬರ ಬಳಸುವುದು ಉತ್ತಮ.

ಸಂತೋಷ ಪಟ್ಟದಕಲ್

ಸಹಾಯಕ ಕೃಷಿ ನಿರ್ದೇಶಕ, ಗಂಗಾವತಿ

=================

ಕೋಟ್

ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ಹೆಚ್ಚುತ್ತಿದ್ದು, ಮಾರಾಟಗಾರರು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕೃಷಿ ಚಟುವಟಿಕೆ ಶುರುವಾಗುವ ಮುನ್ನವೇ ಕೃಷಿ ಇಲಾಖೆ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಿ.

ರಾಮಕೃಷ್ಣ

ಶ್ರೀರಾಮನಗರದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net