ಕಂಪ್ಲಿ ಸೋಮಪ್ಪ ಕೆರೆಯಲ್ಲಿ ಮೊಸಳೆಗಳು ಪತ್ತೆ

Kampli Crocodail
ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಬಿ.ರಾಘವೇಂದ್ರ ಕಂಪ್ಲಿಯ ಸೋಮಪ್ಪ ಕೆರೆಯಲ್ಲಿನ ಮೊಸಳೆಗಳ ಚಲನವಲನ ಪತ್ತೆಗೆ ದುರ್ಬೀನುನಲ್ಲಿ ವೀಕ್ಷಿಸುತ್ತಿರುವುದು.
Published on

ಕಂಪ್ಲಿ: ಇಲ್ಲಿನ ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ಕುರಿಗಾಹಿಗೆ ಒಂದೆರಡು ಮೊಸಳೆಗಳು ಕಂಡಿದ್ದು, ಅವುಗಳ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಬಿ.ರಾಘವೇಂದ್ರ, ಅರಣ್ಯ ವೀಕ್ಷಕ ಬಿ.ನಾಗಪ್ಪ ಸೋಮವಾರ ಆಗಮಿಸಿ ಮೊಸಳೆಯ ಚಲನವಲನ ಪತ್ತೆಗೆ ಮುಂದಾದರು. ಕೋಟೆಯ ಮೀನುಗಾರರ ಸಹಾಯದಿಂದ ಬಲೆ ಹಾಕಿದ್ದು, ಮಂಗಳವಾರವೂ ಬಲೆಗೆ ಮೊಸಳೆ ಬಿದ್ದಿಲ್ಲ. ಕೆರೆ ವೀಕ್ಷಣೆ, ವಾಯುವಿಹಾರಕ್ಕೆ ಬರುವವರಿಗೆ ಎಚ್ಚರಿಕೆ ನೀಡಲು ಪುರಸಭಾಡಳಿತ ಬ್ಯಾನರ್ ಹಾಕಿದೆ.

ಬಿ.ರಾಘವೇಂದ್ರ ಮಾತನಾಡಿ, ಕೆರೆಯ ಪ್ರತಿಮೆ ನಿರ್ಮಾಣ ಕಟ್ಟೆ ಬಳಿ ದೊಡ್ಡ ಗಾತ್ರದ ಮೊಸಳೆ ಸೇರಿ ಎರಡು ಮೊಸಳೆಗಳ ಚಲನವಲನ ಗುರುತಿಸಿದ್ದೇನೆ. ಮೊಸಳೆ ಸೆರೆಗೆ ಸತ್ತ ಕೋಳಿ ಹಾಕಿದ್ದರಿಂದ ಮೊಸಳೆ ತಿಂದು ಹೋಯಿತೇ ಹೊರತು ಬಲೆಗೆ ಬಿದ್ದಿಲ್ಲ. ಮೊಸಳೆಗಳ ರಕ್ಷಣೆಗಾಗಿ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಕೆರೆಗೆ ಚರಂಡಿ ನೀರು ಸೇರುತ್ತಿದ್ದು ವಾಸನೆಯುಕ್ತವಾಗಿದೆ. ಕೆರೆ ನೀರು ಮಲಿನಗೊಂಡಲ್ಲಿ ಮೊಸಳೆ ಆರೋಗ್ಯ ಮತ್ತು ಪ್ರಾಣಕ್ಕೆ ಕುತ್ತು ತರುತ್ತದೆ. ಕೆರೆಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಕೆರೆಯಲ್ಲಿ ಮೊಸಳೆಗಳ ಸೆರೆಗೆ ಬಲೆ ಹಾಕಿದೆ. ಗಾಳಿ ಜೋರಾಗಿದ್ದರಿಂದ ಮೊಸಳೆ ಚಲನವಲನ ಅರಿಯಲು ಆಗುತ್ತಿಲ್ಲ. ಬಲೆಗೂ ಬಿದ್ದಿಲ್ಲ. ಶುಕ್ರವಾರ ಇನ್ನಷ್ಟು ಬಲೆಗಳನ್ನು ಹಾಕಿ ಸೆರೆಹಿಡಿಯಲಾಗುವುದು ಎಂದು ಕೋಟೆಯ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಚಿನ್ನರಾಜು ತಿಳಿಸಿದರು.

ಕೆರೆ ಸುತ್ತಲೂ ತಂತಿ ಬೇಲಿ ನಿರ್ಮಿಸಿದೆ. ಮೊಸಳೆಗಳಿರುವುದರಿಂದ ಕೆರೆಗೆ ಯಾರೂ ಇಳಿಯಬಾರದು. ಮೊಸಳೆ ಕುರಿತು ಎಚ್ಚರಿಕೆಗಾಗಿ ಬ್ಯಾನರ್ ಅಳವಡಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net