

ಕಂಪ್ಲಿ: ಪಿಒಪಿ ಗಣಪತಿ ತಯಾರಿ, ಮಾರಾಟ ಮತ್ತು ಸ್ಥಾಪನೆ ಮಾಡಬಾರದೆಂದು ಗಣಪತಿ ತಯಾರಕರಿಗೆ ಪುರಸಭೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪೇಪರ್ ಗಣೇಶ ಮೂರ್ತಿ ತಯಾರಿಸುವಲ್ಲಿ ಕಲಾವಿದ ಕುಟುಂಬವೊಂದು ಮುಂದಾಗಿದೆ.
ದಿನಪತ್ರಿಕೆ, ರಟ್ಟಿನ ಪೇಪರ್, ಗೆಣಸು, ಹಿಟ್ಟಿನ ಪೌಡರ್, ಪೇಪರ್ ಪೌಡರ್, ರಟ್ಟಿನ ಪೌಡರ್, ನೀರು ಬಣ್ಣ (ವಾಟರ್ ಪೇಂಟ್) ಬಳಸಿಕೊಂಡು ಹಗುರವಾದ, ಸುಲಭವಾಗಿ ನೀರಿನಲ್ಲಿ ಕರಗುವ, ರಾಸಾಯನಿಕ ಮುಕ್ತ ಗಣಪತಿಗಳನ್ನು ಪಟ್ಟಣದಲ್ಲಿ ಬೂಸಾರೆ ವಾಸುದೇವ, ಸುಧಾ, ಗಣೇಶ್ ಕುಟುಂಬ ತಯಾರಿಸುತ್ತಿದೆ.
ಪೇಪರ್ ಬಳಸಿ ಗಣಪತಿ ತಯಾರಿಕೆಗೆ ಬಿಸಿಲಿನ ವಾತಾವರಣ ಬೇಕಿರುವುದರಿಂದ ಜನವರಿಯಿಂದ ಜೂನ್‌ವರೆಗೆ ಪೇಪರ್ ಗಣಪತಿ ತಯಾರಿಸಿ ಇಡಲಾಗುತ್ತದೆ. ಪ್ರತಿಷ್ಠಾಪನೆ ದಿನಗಳು ಹತ್ತಿರವಾದಂತೆ ಅಂತಿಮಸ್ಪರ್ಶ ನೀಡಿ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ. 4ಅಡಿ ಎತ್ತರದ 27ಪೇಪರ್ ಗಣಪತಿಗಳನ್ನು ತಯಾರಿಸಿದ್ದು ಬಿಸಿದೋಸೆಯಂತೆ ಖರ್ಚಾಗುತ್ತಿವೆ.
ಪರಿಸರ ಸ್ನೇಹಿ ಪೇಪರ್ ಗಣಪತಿ ತಯಾರಿಕೆ ಮೊದಲ ಪ್ರಯೋಗವಾಗಿದ್ದು, ಜಿಲ್ಲಾಡಳಿತದಿಂದ ಪ್ರೋತ್ಸಾಹ ದೊರಕಬೇಕಿದೆ. ಗಣಪತಿ ತಯಾರಿಕೆಯ ದ್ರವ್ಯಗಳನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಬೇಕು. ಗಣಪತಿ ತಯಾರಿಕೆಗೆ ಸರ್ಕಾರದಿಂದ ಸೌಲಭ್ಯಗಳು ದೊರಕಬೇಕು. ಬೂಸಾರೆ ವಾಸುದೇವ, ಪೇಪರ್ ಗಣಪತಿ ತಯಾರಕ, ಕಂಪ್ಲಿ ಪಿಒಪಿ ಗಣಪತಿ ತಯಾರಿ, ಮಾರಾಟ ಮತ್ತು ಖರೀದಿ ನಿಷೇಧಿಸಿ ಪಟ್ಟಣದ 12ಜನ ಗಣಪತಿ ತಯಾರಕರಿಗೆ ನೋಟಿಸ್ ನೀಡಲಾಗಿದೆ. ಪಿಒಪಿ ಗಣಪತಿ ಪ್ರತಿಷ್ಠಾಪಕರಿಗೆ ಪುರಸಭೆಯಿಂದ ಅನುಮತಿ ನೀಡುವುದಿಲ್ಲ. ಪರಿಸರ ಸ್ನೇಹಿ ಗಣಪತಿಗಳನ್ನೇ ಕೊಳ್ಳಬೇಕು.ಕೆ.ದುರುಗಣ್ಣ, ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ