ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸಂಕೀರ್ಣ ಶಸ್ತ್ರ ಚಿಕಿತ್ಸೆ

udp-10-kmc
Published on

ಉಡುಪಿ: ಗರ್ಭಿಣಿಯಲ್ಲಿ ಗರ್ಭಕೋಶದ ಬಾಯಿಗೆ ಮಗುವಿನ ಕಸ ಅಡ್ಡಲಾಗಿ ಹೆರಿಗೆಯ ಬಳಿಕ ಸಹಜವಾಗಿ ಕಸ ಬೇರ್ಪಡದ ಸ್ಥಿತಿ ಹೊಂದಿದ್ದ ಅಪರೂಪದ ಪ್ರಕರಣದಲ್ಲಿ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಯಶಸ್ವಿಯಾಗಿ ನಿಭಾಯಿಸಿದೆ.

ಎರಡನೆ ಬಾರಿ ಗರ್ಭ ಧರಿಸಿದ್ದ, 31 ವರ್ಷ ವಯಸ್ಸಿನ ಮಹಿಳೆ 34ನೇ ವಾರದ ಗರ್ಭಾವಸ್ಥೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಮಗುವಿನ ಕಸ ಗರ್ಭಕೋಶದ ಬಾಯಿಗೆ ಅಡ್ಡಲಾಗಿರುವ ವಿಶೇಷ ಸ್ಥಿತಿ ಬೆಳಕಿಗೆ ಬಂದಿತ್ತು. ಅಲ್ಟ್ರಾಸೌಂಡ್​ ಪರೀಕ್ಶೆ ಮಾಡಿದ ನಂತರ ಪ್ಲಾಸೆಂಟಾ ಪ್ರೀವಿಯಾ ಮತ್ತು ಪ್ಲಾಸೆಂಟಾ ಅಕ್ರಿಟಾ ಇರುವ ಸಾಧ್ಯತೆ ಕಂಡು ಬಂದಿತು.

ಪರಿಸ್ಥಿತಿಯನ್ನು ಅರಿತ ಹೆರಿಗೆ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀಪಾದ ಹೆಬ್ಬಾರ್​ ಅವರ ನೇತೃತ್ವದ ತಂಡ ವಿಶೇಷ ಶಸ್ತ್ರ ಚಿಕಿತ್ಸೆಯನ್ನು ನಡೆಸಿತು. ಇಂಟೆರ್ವೆನ್ಷನಲ್​ ರೇಡಿಯಾಲಜಿ ತಜ್ಞರು, ಶಿಶುರೋಗ ತಜ್ಞರು, ಅರಿವಳಿಕೆತಜ್ಞರು ಈ ಸಂಕೀರ್ಣ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

ಶಸ್ತ್ರ ಚಿಕಿತ್ಸೆಯ ಆರಂಭದಲ್ಲಿ, ಗರ್ಭಕೋಶದ ಪ್ರದೇಶಕ್ಕೆ ರಕ್ತ ಸರಬರಾಜು ಮಾಡುವ ಎರಡೂ ಕಡೆಯ ಅಂತರಿಕ ಇಲಿಯಾಕ್​ ರಕ್ತನಾಳಗಳಲ್ಲಿ ಕೋಬ್ರಾ ಕ್ಯಾಥೆಟರ್​ ಬಳಸಿ ರಕ್ತ ಚಲನೆಯ ನಿಯಂತ್ರಣ ವ್ಯವಸ್ಥೆ ರೂಪಿಸಲಾಯಿತು. ಅದನ್ನು ಇಂಟೆರ್ವೆನ್ಷನಲ್​ ರೇಡಿಯಾಲಜಿ ವಿಭಾಗದ ಡಾ. ಮಿಥುನ್​ ಶೇಖರ್​ ಮತ್ತು ಡಾ ಹರ್ಷಿತ್​ ಕ್ರಮಧಾರಿ ನಿರ್ವಹಿಸಿದರು. ಆ ಬಳಿಕ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯಲಾಯಿತು. ಮಗು ಹೊರತೆಗೆದ ಬಳಿಕ ರಕ್ತನಾಳಗಳಿಗೆ ತೊಡಿಸಲಾಗಿದ್ದ ಬಲೂನುಗಳನ್ನು ಹಿಗ್ಗಿಸಿ, ರಕ್ತಸ್ರಾವ ಸಂಭವಿಸದಂತೆ ಸೂಕ್ತವ್ಯವಸ್ಥೆಗಳನ್ನು ಮಾಡಲಾಯಿತು. ಗರ್ಭಕೋಶಕ್ಕೆ ಅಂಟಿಕೊಂಡಿದ್ದ ಪ್ಲಾಸೆಂಟಾವನ್ನು ಬೆರಳುಗಳಿಂದ ಜಾಗರೂಕವಾಗಿ ಬಿಡಿಸಿ ತೆಗೆಯಲಾಯಿತು. ಬಳಿಕ ಮೇಲಿನ ಎರಡೂ ರಕ್ತನಾಳಗಳಲ್ಲಿ ಜೆಲ್​ ಫೋಮ್​ ನಿಂದ ಎಂಬೋಲೈಸೇಶನ್​ ಮಾಡಲಾಯಿತು.

ಜೆಲ್​ ಫೋಮ್​ ಎಂಬೋಲೈಸೇಶನ್​ನ ಪ್ರಯೋಜನವೆಂದರೆ ಅದು ಗರ್ಭಾಶಯ ಮತ್ತು ಮೂತ್ರಕೋಶಕ್ಕೆ ಎಲ್ಲಾ ರಕ್ತನಾಳಗಳನ್ನು ಮುಚ್ಚುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಅಂತರಿಕ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವ ಸಮಾನ್ಯವಾಗಿತ್ತು. ನಷ್ಟವನ್ನು ಸರಿದೂಗಿಸಲು ಕೇವಲ 2 ಪಿಂಟ್​ ರಕ್ತವನ್ನು ನೀಡಲಾಗಿತು. ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಸಾಮಾನ್ಯ ಸ್ಥಿತಿಯು ಸ್ಥಿರವಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವಳನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ತದನಂತರ ತಾಯಿ ಮತ್ತು ಮಗು ಆರಾಮವಾಗಿ ಹೆರಿಗೆಯ ಅವಧಿಯನ್ನು ಪೂರೈಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಶ್ರೀಪಾದ ಹೆಬ್ಬಾರ್​ ತಿಳಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಪರೇಶನ್​ ಥಿಯೇಟರ್​ (ಕ್ಯಾಥ್​ ಲ್ಯಾಬ್​) ನಲ್ಲಿ ಈ ವಿಶೇಷ ಪ್ರಕ್ರಿಯೆಯನ್ನು ನಡೆಸಲಾಗಿದೆ. ಈ ಲ್ಯಾಬ್​ನಲ್ಲಿ ರಕ್ತನಾಳಗಳೊಳಗೆ ಬಲೂನ್​ ಅಳವಡಿಕೆ ಮತ್ತು ರಕ್ತನಾಳಗಳಲ್ಲಿ ರಕ್ತಪ್ರವಹಿಸುವುದನ್ನು ತಡೆಯಲು (ಎಂಬೊಲೈಜೇಷನ್​), ಸಿ ಆಮ್​ರ್ (ಅ-ಂಡಿಟ) ಮತ್ತು ಇತರ ಉಪಕರಣಗಳ ಸೌಲಭ್ಯವಿದೆ. ಈ ಶಸ್ತ್ರ ಚಿಕಿತ್ಸೆಗೆ ಸರಾಸರಿ ಒಂದೂವರೆ ಗಂಟೆ ಸಮಯ ತಗುಲಿದೆ ಎಂದು ಇಂರ್ಟವೆನ್ಷನಲ್​ ರೇಡಿಯಾಲಜಿ ಕನ್ಸಲ್ಟಂಟ್​ ಡಾ. ಮಿಥುನ್​ ಶೇಖರ್​ ತಿಳಿಸಿದರು.

ಪ್ಲಾಸೆಂಟಾ ಅಕ್ರಿಟಾ ಸ್ಥಿತಿಯಲ್ಲಿ, ಪ್ಲಾಸೆಂಟಾವು ಗರ್ಭಾಶಯದ ಗೋಡೆಯೊಳಗೆ ಆಳದಲ್ಲಿ ಹೂತುಹೋಗಿರುತ್ತದೆ. ಪ್ರಸವದ ಬಳಿಕ ಇದು ಗರ್ಭಕೋಶದಿಂದ ಬೇರ್ಪಡುವುದಿಲ್ಲ, ಈ ಕಾರಣದಿಂದ ಅಪಾಯಕಾರಿ ಮಟ್ಟದಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಇದು ಶೇ. 7ರಷ್ಟು ಅಧಿಕ ಮರಣ ದರವನ್ನು ಹೊಂದಿರುವ ಗಂಭೀರ ಸ್ಥಿತಿಯಾಗಿದೆ. ವೈದ್ಯರು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್​ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net