ವರ್ಷದಲ್ಲಿ ಎರಡನೇ ಹಂತದ ಕಾಮಗಾರಿ ಮುಕ್ತಾಯ

25KDR1
Published on

ಕಡೂರು: ಒಂದೂವರೆ ವರ್ಷದೊಳಗಾಗಿ ಭದ್ರಾ ಉಪಕಣಿವೆ ಯೋಜನೆಯಡಿ ಎರಡನೇ ಹಂತದ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಮಲ್ಲಾಘಟ್ಟ ಮತ್ತು ಹೇಮಗಿರಿ ಭಾಗದಲ್ಲಿ ಭದ್ರಾ ಉಪಕಣಿವೆ ಯೋಜನೆಯಡಿ ಕೆರೆ ತುಂಬಿಸುವ ಯೋಜನೆಯ 382.60 ಕೋಟಿ ರೂ. ವೆಚ್ಚದ ಪೈಪ್ ಲೈನ್ ಅಳವಡಿಕೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಭದ್ರಾ ಉಪಕಣಿವೆ ಯೋಜನೆಯನ್ನು ನಬಾರ್ಡ್‌ಗೆ ಸೇರಿಸುವ ಚಿಂತನೆಯಿದ್ದು, ಈಗಾಗಲೇ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.
ಶೀಘ್ರದಲ್ಲಿ ಎರಡನೇ ಹಂತದ ಕೆರೆಗಳಿಗೆ ನೀರು ದೊರೆಯಲಿದೆ. 374 ಕೋಟಿ ರೂ.ವೆಚ್ಚದ ಮೂರನೇ ಹಂತದ ಕಾಮಗಾರಿ ಟೆಂಡರ್ ಹಂತಕ್ಕೆ ಬಂದಿದೆ. ಎತ್ತಿನಹೊಳೆ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ವಿಷ್ಣು ಸಮುದ್ರ ಕೆರೆಗೆ ಬರುವ ನೀರನ್ನು ಕಡೂರು- ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ನೀಡುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಎರಡನೇ ಹಂತದ ಕಾಮಗಾರಿಯಲ್ಲಿ 78 ಕೆರೆಗಳ ಪೈಕಿ ಬಹುಪಾಲು ತಾಲೂಕಿನಲ್ಲಿಯೇ ಹೆಚ್ಚು ಕಾಮಗಾರಿಗಳು ಅನುಷ್ಟಾನಗೊಳ್ಳಲಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಲ್ಲಾಘಟ್ಟ ಭಾಗದಲ್ಲಿ ಜಂಕ್ಷನ್ ಮೂಲಕ ಪಂಪ್‌ಹೌಸ್ ನಿರ್ಮಿಸಿ ಸಿಂಗಟಗೆರೆ, ಕೆ.ಬಿದರೆ ಹಾಗೂ ಪಂಚನಹಳ್ಳಿ ಭಾಗದ ಕೆರೆಗಳಿಗೂ ನೀರು ಒದಗಿಸಲಾಗುವುದು.
ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಹರ್ಷ ಮಾತನಾಡಿ, 1281 ಕೋಟಿ ರೂ.ವೆಚ್ಚದ ಭಧ್ರಾ ಉಪಕಣಿವೆ ಯೋಜನೆಯ ಮೊದಲ ಹಂತದಲ್ಲಿ ದೊಡ್ಡಘಟ್ಟ ತನಕ ನೀರು ತರುವ ಕಾಮಗಾರಿ ಶೇ.80 ಮುಗಿದಿದೆ. ಈ ಜಾಗದಿಂದ ಅಜ್ಜಪುರದ 5, ಅರಸೀಕೆರೆಯ 3 ಒಳಗೊಂಡಂತೆ ಕಡೂರು ತಾಲೂಕಿನ 70 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ತಂಗಲಿ, ಮಲ್ಲಾಘಟ್ಟ, ವಿಷ್ಣು ಸಮುದ್ರ ಕೆರೆಗಳಿಗೆ ನೀರು ಹರಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net