

ಮಂಗಳೂರು: ಕೊವಿಡ್ ಪಾಸಿಟಿವ್ ಆಗಿದ್ದ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗು ಸಂಪೂರ್ಣ ಗುಣಮುಖವಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ.
ಮಗುವಿನ ತಾಯಿ ಹಾಗೂ ಅಜ್ಜಿಯ ಪರೀಕ್ಷಾ ವರದಿಗಳು ಕೂಡ ನೆಗೆಟಿವ್ ಆಗಿದ್ದು, ಕುಟುಂಬವಿಡೀ ಖುಷಿಯಿಂದ ಶನಿವಾರ ಬಿಡುಗಡೆಯಾಗಿ ಮನೆಗೆ ತೆರಳಿದೆ. ಇದುವರೆಗೆ ದ.ಕ. ಜಿಲ್ಲೆಯ 12 ಕರೊನಾ ಪಾಸಿಟಿವ್ ಪ್ರಕರಣಗಳಲ್ಲಿ 6 ಮಂದಿ ಗುಣಮುಖರಾಗಿ, ಬಿಡುಗಡೆಗೊಂಡಂತಾಗಿದೆ.
ಈ ವಾರ ಪೂರ್ತಿ ಅಂದರೆ ಏಪ್ರಿಲ್ 5ರಿಂದ 11ರ ವರೆಗೆ ದ.ಕ. ಜಿಲ್ಲೆಯಲ್ಲಿ ಯಾವುದೇ ಹೊಸ ಕರೊನಾ ಪ್ರಕರಣಗಳು ದೃಢಪಟ್ಟಿಲ್ಲ. ಇದುವರೆಗೆ 12 ಪಾಸಿಟಿವ್ ಪ್ರಕರಣಗಳಲ್ಲಿ 128 ಪ್ರಾಥಮಿಕ ಸಂಪರ್ಕಿತರು ಹಾಗೂ 593 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ. ಆಶಾ ಕಾರ್ಯಕರ್ತರು ಈ ಎಲ್ಲ ಸಂಪರ್ಕಿತರನ್ನು ಭೇಟಿಯಾಗಿ ಪುನಃ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನೂ ಭೇಟಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 6447 ಮನೆಗಳಿಗೆ ಭೇಟಿ ನೀಡಿ 30,663 ಮಂದಿಯನ್ನು ಸಂಪರ್ಕಿಸಿ ಅವರ ಆರೋಗ್ಯದ ಸ್ಥಿತಿಗತಿ ಮಾಹಿತಿಯನ್ನು ಕಲೆ ಹಾಕಿದ್ದರು.
ಆಶಾ ಕಾರ್ಯಕರ್ತೆಯರ ಈ ನಿಷ್ಠೆ ಹಾಗೂ ಶ್ರದ್ಧೆಯಿಂದ ಕೂಡಿದ ಕಾರ್ಯಕ್ಕೆ ಜಿಲ್ಲಾಡಳಿತ ಶ್ಲಾಘನೆ ವ್ಯಕ್ತಪಡಿಸಿದೆ, ಇದಕ್ಕೆ ಸಹಕಾರವಿತ್ತ ಪೊಲೀಸ್ ಇಲಾಖೆಗೂ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಕ್ಕೇ ವಿಶೇಷ ಪ್ರಕರಣ
10 ತಿಂಗಳ ಮಗುವಿನ ಕರೊನಾ ಪ್ರಕರಣ ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿತ್ತು. ಎದೆಹಾಲು ಕುಡಿಯುವ ಪುಟ್ಟ ಕಂದನಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಮಗುವನ್ನು ಪ್ರತ್ಯೇಕಿಸುವುದರೊಂದಿಗೆ ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮ ಕಾರ್ಯ. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿ, ಮಗುವನ್ನು ಗುಣಮುಖವಾಗಿಸಿದ್ದಾರೆ.
ಅದೇ ರೀತಿ, ಮಗುವಿನ ನಿವಾಸವಿರುವ ಗ್ರಾಮದಲ್ಲಿ ಯಾರಿಗೂ ಕರೊನಾ ಹರಡದಿರುವುದು ಮತ್ತೊಂದು ಸಮಾಧಾನಕರ ವಿಷಯ. ಕರೊನಾ ದೃಢಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ದಿಗ್ಬಂಧನಗೊಳಿಸಲಾಗಿತ್ತು. ಗ್ರಾಮಸ್ಥರು ಉತ್ತಮ ಸಹಕಾರ ನೀಡಿದ್ದಾರೆ. ಈ ಅವಧಿಯಲ್ಲಿ ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲ ಅಗತ್ಯ ಸಾಮಗ್ರಿಗಳು, ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿದೆ.
ದ.ಕ. ಎಲ್ಲ 46 ನೆಗೆಟಿವ್
ದ.ಕ. ಜಿಲ್ಲೆಯಲ್ಲಿ ಶನಿವಾರ ಒಟ್ಟು 52 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದ್ದು, 34 ಸ್ಯಾಂಪಲ್‌ಗಳನ್ನು ವೆನ್ಲಾಕ್‌ನಲ್ಲಿರುವ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶನಿವಾರ ಸಿಕ್ಕಿರುವ ಎಲ್ಲ 46 ಸ್ಯಾಂಪಲ್ ವರದಿಗಳೂ ನೆಗೆಟಿವ್ ಆಗಿರುತ್ತವೆ.
2598 ಮಂದಿ ಮನೆಯಲ್ಲಿ ಹಾಗೂ ಇಎಸ್‌ಐ ಆಸ್ಪತ್ರೆಯಲ್ಲಿ 23 ಮಂದಿ ಕ್ವಾರಂಟೈನ್ ಆಗಿದ್ದಾರೆ. 8 ಮಂದಿಯನ್ನು ಫೀವರ್ ಕ್ಲಿನಿಕ್‌ಗಳಿಂದ ಹೆಚ್ಚಿನ ನಿಗಾಕ್ಕಾಗಿ ಕಳುಹಿಸಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
ಉಡುಪಿ 11 ವರದಿ ನೆಗೆಟಿವ್
ಉಡುಪಿ: ಜಿಲ್ಲೆಯಲ್ಲಿ ಶನಿವಾರ 11 ಮಂದಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದು, 5 ಮಂದಿ ಬಿಡುಗಡೆಯಾಗಿದ್ದಾರೆ. 11 ಶಂಕಿತರ ವರದಿ ವೈದ್ಯರ ಕೈ ಸೇರಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. 5 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿವರೆಗೆ ಕಳುಹಿಸಿದ ಮಾದರಿಗಳಲ್ಲಿ 41 ಮಂದಿಯ ವರದಿ ಬರಲು ಬಾಕಿ ಇದೆ.
28 ಮಂದಿ ನೋಂದಣಿ ಮಾಡಿಕೊಂಡಿದ್ದು, 99 ಮಂದಿ 28 ದಿನಗಳ ನಿಗಾ ಹಾಗೂ 67 ಮಂದಿ 14 ದಿನಗಳ ನಿಗಾ ಪೂರೈಸಿದ್ದಾರೆ. ಒಟ್ಟು 129 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 23 ಮಂದಿ ಹಾಸ್ಟಿಟಲ್ ಕ್ವಾರಂಟೈನ್‌ನಲ್ಲಿದ್ದಾರೆ.
ಐಸೋಲೇಶನ್‌ಗೆ ದಾಖಲಾದವರಲ್ಲಿ 7 ಮಂದಿ ಪುರುಷರು ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ. ಓರ್ವ ಮಹಿಳೆ ಕರೊನಾ ಶಂಕಿತರಾಗಿದ್ದು, 3 ಮಂದಿ ಅನಾರೋಗ್ಯಪೀಡಿತರಾಗಿದ್ದಾರೆ.