ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ

22 nrp 3
Published on

ಎನ್.ಆರ್.ಪುರ: ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭಾನುವಾರ ಪಟ್ಟಣಕ್ಕೆ ಭೇಟಿ ನೀಡಿ ವಿವಿಧ ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿದೆ. ಈ ಕಾಮಗಾರಿಗಳಲ್ಲಿ ಶೇ.25 ರಷ್ಟು ಕಾಮಗಾರಿ ಗುಣಮಟ್ಟವನ್ನು ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿ ಬಿಲ್ ಪಾವತಿಸಬೇಕು ಎಂಬ ನಿಯಮವಿದೆ. ಅದಂತೆ ಇಂದು ಶೃಂಗೇರಿ ಹಾಗೂ ಎನ್.ಆರ್.ಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಲಾಗಿದೆ. ನಗರೋತ್ಥಾನ ಯೋಜನೆಯಡಿ ಎನ್.ಆರ್.ಪುರ ಪಟ್ಟಣದ 6,7, 8. 10, 11 ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಂಕ್ರಿಟ್ ರಸ್ತೆ, ಟಾರ್ ರಸ್ತೆ, ಬಾಕ್ಸ್ ಚರಂಡಿ ಮತ್ತು ಕವರಿಂಗ್ ಸ್ಯ್ಲಾಬ್ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಲಾಗಿದೆ. ಅಪೂರ್ಣಗೊಂಡಿರುವ ಕೆಲವು ಕಾಮಗಾರಿಗಳನ್ನು ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ತೃಪ್ತಿತಂದಿದೆ ಎಂದರು.
ಪಟ್ಟಣ ಪಂಚಾಯಿತಿಯ ವಾರ್ಡ್ ನಂ1ರ ಸರ್ವೇ ನಂ.200ರಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಮೂಲ ಸೌಕರ್ಯ ಒದಗಿಸಲಾಗಿದ್ದು, ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ಸದಸ್ಯೆ ಜುಬೇದಾ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್‌ವಸೀಂ, ಮುಕುಂದ, ಜಿಲ್ಲಾ ಯೋಜನಾ ನಿರ್ದೇಶಕಿ ನಾಗರತ್ನ, ಎಇಇ ಜರೀನಾ, ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಕಂದಾಯ ನಿರೀಕ್ಷಕ ವಿಜಯಕುಮಾರ್, ಇಂಜಿನಿಯರ್ ಸುನಿಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net