ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಬಳಿಯ ಹಳ್ಳದಲ್ಲಿ ಚೆಕ್ ಡ್ಯಾಂ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್,ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಎ.ಈ ರಘು, ಮಂಜೇಶ್, ವಿಜಯಕುಮಾರ್, ಅಭಿಲಾಷ್ ಇತರರು ಇದ್ದರು.
ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಬಳಿಯ ಹಳ್ಳದಲ್ಲಿ ಚೆಕ್ ಡ್ಯಾಂ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್,ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಎ.ಈ ರಘು, ಮಂಜೇಶ್, ವಿಜಯಕುಮಾರ್, ಅಭಿಲಾಷ್ ಇತರರು ಇದ್ದರು.
Published on

ಹನೂರು: ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜತೆಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಸೂಚನೆ ನೀಡಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಬಳಿ ಶುಕ್ರವಾರ 2 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ಹಾಗೂ ತಡೆಗೋಡೆ ನಿರ್ಮಾಣ, ಕೌದಳ್ಳಿಯಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಕೆ.ಗುಂಡಾಪುರ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಾಲೆ ಆಭಿವೃದ್ಧಿ ಕಾಮಗಾರಿ, ಬಿ.ಎಂ.ಹಳ್ಳಿಯಲ್ಲಿ 30 ಲಕ್ಷ ರೂ.ಹಾಗೂ ಗಾಂಧಿನಗರದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಾಲೂರು ಮಠವು ಉತ್ತಮ ಪ್ರಕೃತಿ ಮಡಿಲಿನಲ್ಲಿ ಇದ್ದು, ಇಲ್ಲಿಗೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಸಮೀಪದಲ್ಲಿನ ಹಳ್ಳಕ್ಕೆ ತಡೆಗೋಡೆ ಇಲ್ಲದ ಪರಿಣಾಮ ಮಳೆಗಾಲದ ವೇಳೆ ಭಕ್ತರು ತೊಂದರೆಯನ್ನು ಅನುಭವಿಸುತ್ತಿದ್ದರು. ಜತೆಗೆ ಅಂತರ್ಜಲ ಮಟ್ಟ ಸುಧಾರಿಸಲು ಹಳ್ಳದಲ್ಲಿ ನೀರು ನಿಲ್ಲುವಂತಾಗಿರಲಿಲ್ಲ. ಹಾಗಾಗಿ ಚೆಕ್ ಡ್ಯಾಂ ಹಾಗೂ ತಡೆಗೋಡೆಯನ್ನು ನಿರ್ಮಿಸಬೇಕೆನ್ನುವುದು ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಆಶಯವಾಗಿತ್ತು. ಇದನ್ನು ಮನಗಂಡು ಇದೀಗ ಈ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ಇನ್ನು ಉಡುತೊರೆ ಜಲಾಶಯದ ಮೂಲಕ ರೈತರ ಜಮೀನುಗಳಿಗೆ ನೀರೊದಗಿಸುವ ನಾಲೆಯಲ್ಲಿ ಗಿಡಗಂಟಿಗಳು ಬೆಳೆದಿತ್ತು. ಇದರಿಂದ ಸರಾಗವಾಗಿ ನೀರು ಹರಿಯಲು ತೊಡುಕಾಗಿ ಪರಿಣಮಿಸಿತ್ತು. ನಾಲೆಯನ್ನು ಅಭಿವೃದ್ಧಿಪಡಿಸುವಂತೆ ರೈತರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ನಾಲೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗೆಯೇ ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ಬಿ.ಎಂ ಹಳ್ಳಿ, ಗಾಂಧಿನಗರ ಹಾಗೂ ಅಲ್ಪ ಸಂಖ್ಯಾತರ ಕಾಲನಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕೌದಳ್ಳಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿನ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.

ಸಾಲುರು ಮಠದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ನೀರಾವರಿ ಇಲಾಖೆಯ ಎಇಇ ಅಭಿಲಾಷ್, ಪಿಎಸಿಸಿ ನಿರ್ದೇಶಕ ಮಂಜೇಶ್, ಮುಖಂಡರಾದ ವಿಜಯಕುಮಾರ್, ಬಾಬು, ಜೆಸ್ಸಿಂಪಾಷ, ಅಜ್ಗಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net