ನೀರಿನ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

nrp mm
ಎನ್.ಆರ್.ಪುರ ತಾಪಂನಲ್ಲಿ ಆಡಳಿತಾಧಿಕಾರಿ ಎಲ್.ನಂದೀಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಇಒ ಎಚ್.ಡಿ.ನವೀನ್‌ಕುಮಾರ್, ಅಧಿಕಾರಿಗಳು, ಪಿಡಿಒಗಳು ಇದ್ದರು.
Published on

ಎನ್.ಆರ್.ಪುರ: ಕುಡಿಯುವ ನೀರಿನ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ ಎಂದು ಕುಡಿಯುವ ನೀರು ವಿಭಾಗದ ಇಂಜಿನಿಯರ್‌ಗೆ ತಾಪಂ ಆಡಳಿತಾಧಿಕಾರಿ ಎಲ್.ನಂದೀಶ್ ಸೂಚಿಸಿದರು.

ಬುಧವಾರ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸರ್ಕಾರ ಸಾಧಾರಣ ಬರ ಪೀಡಿತ ತಾಲೂಕೆಂದು ಘೋಷಿಸಿದೆ. ಮೆಸ್ಕಾಂ ಹಾಗೂ ಪಂಚಾಯತ್ ರಾಜ್ ಕುಡಿಯುವ ನೀರಿನ ವಿಭಾಗದ ಇಂಜಿನಿಯರ್‌ಗಳು ಎಲ್ಲ ಯೋಜನೆಯಡಿ ಬಾಕಿ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಯಾವುದೇ ಗ್ರಾಪಂನಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸ್ಥಿತಿ ನಿರ್ಮಾಣವಾಗಬಾರದು. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಕೂಡಲೇ ಗಮನಕ್ಕೆ ತರಬೇಕು. ಕುಡಿಯುವ ನೀರು ವಿಭಾಗದ ಇಂಜಿನಿಯರ್‌ಗೂ ಮಾಹಿತಿ ನೀಡುವ ಮೂಲಕ ಸದಾ ಸಂಪರ್ಕದಲ್ಲಿರಬೇಕೆಂದು ಪಿಡಿಒಗಳಿಗೆ ಸೂಚಿಸಿದರು.
ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವಿಜಯಕುಮಾರ್ ಮಾತನಾಡಿ, ತಾಲೂಕಿನಲ್ಲಿ ಒಂದು ಕರೊನಾ ಪ್ರಕರಣ ವರದಿಯಾಗಿದ್ದು, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಕರೊನಾ ಲಸಿಕೆ ವಂಚಿತರು ಲಸಿಕೆ ಪಡೆಯಬೇಕು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಔಷಧ ದಾಸ್ತಾನು ಇದೆ ಎಂದು ಸಭೆಗೆ ತಿಳಿಸಿದರು.
ಹಿರಿಯ ಪಶು ನಿರೀಕ್ಷಕ ಶೇಷಾಚಲ ಮಾತನಾಡಿ, ಗ್ರಾಪಂಗೆ ಒಬ್ಬರಂತೆ ಸ್ವ ಸಹಾಯ ಸಂಘದ ಸದಸ್ಯೆಯರನ್ನು ಪಶು ಸಖಿಯರನ್ನಾಗಿ ನೇಮಿಸಿಕೊಳ್ಳಲಾಗಿದೆ. ಗ್ರಾಮದಲ್ಲಿ ಅಗತ್ಯಬಿದ್ದಲ್ಲಿ ಜಾನುವಾರುಗಳಿಗೆ ಪ್ರಥಮ ಚಿಕತ್ಸೆ ನೀಡಲು ಪಶುಸಖಿಯರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮೆಸ್ಕಾಂ ಎಇಇ ಗೌತಮ್ ಮಾತನಾಡಿ, ಗಂಗಾಕಲ್ಯಾಣ ಯೋಜನೆಯಡಿ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗಿದೆ. ಜೆಜೆಎಂ ಯೋಜನೆಯವರು ಹಣ ಪಾವತಿಸದೆ ಇರುವುದರಿಂದ ಕುಡಿಯುವ ನೀರಿನ ಕಾಮಗಾರಿಗೆ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದೆ ಎಂದರು.
ಆಡಳಿತಾಧಿಕಾರಿ ಎಲ್.ನಂದೀಶ್ ಮಾತನಾಡಿ, ಹಣ ಪಾವತಿಸುವಂತೆ ಇಂಜಿನಿಯರ್ ರಕ್ಷತ್ ಸಾಗರ್ ಅವರಿಗೆ ಸೂಚಿಸಿದರು. ರಕ್ಷತ್ ಸಾಗರ್ ಮಾತನಾಡಿ, ಜೆಜೆಎಂ ಮೊದಲ ಹಂತದ 17 ಕಾಮಗಾರಿಗಳಲ್ಲಿ 10 ಕಾಮಗಾರಿಗಳು ಪೂರ್ಣಗೊಂಡಿದ್ದು, 7 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಎರಡನೇ ಹಂತದ 49 ಕಾಮಗಾರಿಗಳ ಪೈಕಿ 20 ಕಾಮಗಾರಿಗಳು ಪೂರ್ಣಗೊಂಡಿದ್ದು, 29 ಕಾಮಗಾರಿಗಳು ಪ್ರಗತಿಯಲ್ಲಿವೆ. ಮೂರನೇ ಹಂತದ 10 ಕಾಮಗಾರಿಗಳು ಪ್ರಗತಿಯಲ್ಲಿವೆ. ನಾಲ್ಕನೇ ಹಂತದ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ತುರ್ತು ಕುಡಿಯುವ ನೀರಿನ ಯೋಜನೆಯಡಿ 10 ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಶಾಂತಿಭವನ ಬಳಿ ಮೆಸೆಮನೆ ಸಮೀಪದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ಥಳಕ್ಕೆ ಅರಣ್ಯ ಇಲಾಖೆ ಸಮಸ್ಯೆ ಇದೆ ಎಂದು ತಿಳಿಸಿದರು.
ಎಲ್.ನಂದೀಶ್ ಮಾತನಾಡಿ, ಸ್ಥಳ ಪರಿಶೀಲಿಸುವಂತೆ ವಲಯ ಅರಣ್ಯ ಅಧಿಕಾರಿ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net