ಫೆಬ್ರವರಿ ಅಂತ್ಯಕ್ಕೆ ವೆಲೊಡ್ರೋಮ್ ಪೂರ್ಣಗೊಳಿಸಿ; ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

DC VISIT WELODROM
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿ ಪರಿಶೀಲಿಸಿದರು. ಗುರುನಾಥ ದಡ್ಡೆ, ಪ್ರಶಾಂತ ಚನಗೊಂಡ, ಜಿ.ಎನ್. ಮಲಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರ ಹೊರವಲಯದ ಭೂತನಾಳ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಕಾಮಗಾರಿ ಪರಿಶೀಲಿಸಿದ ಅವರು, ಕಾಮಗಾರಿಗೆ ವೇಗ ನೀಡುವುದರ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಸೈಕ್ಲಿಂಗ್ ವೆಲೋಡ್ರೊಮ್ ಕಾಮಗಾರಿ ಶೇ.95ರಷ್ಟು ಮುಕ್ತಾಯಗೊಂಡಿದ್ದು, ಅಲ್ಲಲ್ಲಿ ಟ್ರ್ಯಾಕ್ ಸಮತಟ್ಟುಗೊಳಿಸುವ ಹಾಗೂ ಕೆಲವು ಕಡೆ ಬಾಕಿ ಇರುವ ಪೇಂಟಿಂಗ್ ಕಾರ್ಯವನ್ನು ವಾರದಲ್ಲಿ ಪೂರ್ಣಗೊಳಿಸಬೇಕು ಹಾಗೂ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧಿಕಾರಿಗಳಿಂದ ಪರಿಶೀಲನೆ ನಡೆಸುವ ಸೂಕ್ತ ಕ್ರಮಕ್ಕಾಗಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಇಲಾಖೆಯ ಅಧೀನದಲ್ಲಿರುವ ಜಲ ಮೂಲ (ಬಾವಿ) ಗಳಿಂದ ಸೈಕ್ಲಿಂಗ್ ವೆಲೊಡ್ರೋಮ್‌ಗೆ ಪೈಪ್‌ಲೈನ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸುವಂತೆಯೂ, ವೆಲೊಡ್ರೋಮ್ ಆವರಣದಲ್ಲಿ ಸಸಿಗಳನ್ನು ನೆಡಲು ಅಗತ್ಯ ಕ್ರಮಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ವಾರದ ಕಾಲಾವಧಿಯಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಿಳಿಸಿದರು.

ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ವಿಜಯಪುರ ತಹಸೀಲ್ದಾರ್ ಪ್ರಶಾಂತ ಚನಗೊಂಡ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್. ಮಲಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್ ದೈವಾಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net