

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಗೋಕುಲ ರಸ್ತೆಯಿಂದ ಶ್ರೀ ಸಿದ್ಧಾರೂಢ ಸ್ವಾಮಿ ಮಠಕ್ಕೆ ಸಂಪರ್ಕ ಕಲ್ಪಿಸುವ ಆರ್.ಎನ್. ಶೆಟ್ಟಿ ರಸ್ತೆಯಲ್ಲಿ ಕೈಗೊಂಡಿರುವ 78 ಲಕ್ಷ ರೂ. ವೆಚ್ಚದ ಒಳಚರಂಡಿ ಕೊಳವೆ ಮಾರ್ಗ (ಯುಜಿಡಿ) ಅಳವಡಿಕೆ ಕಾಮಗಾರಿಯನ್ನು ಜುಲೈ 15ರೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಳಿಕ ಅಕ್ಷಯ ಪಾರ್ಕ್ ಅಪಾರ್ಟಮೆಂಟ್ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ಮಾರ್ಗದಲ್ಲಿ ಯುಜಿಡಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಶೇ. 60ರಿಂದ 70 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಇಷ್ಟು ದಿನ ಚುನಾವಣೆ ಎಂದು ಸಬೂಬು ಹೇಳಿದೀರಿ. ಇನ್ನು ಮುಂದೆ ಮಳೆಗಾಲವೆಂದು ಸಬೂಬು ಹೇಳದೆ ಸೂಚಿತ ದಿನಾಂಕದೊಳಗೆ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.
ಈ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ಮುಗಿದ ಬಳಿಕ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ನಿರಂತರ ನೀರು ಯೋಜನೆಯಡಿ 200 ಮೀಟರ್ ನಷ್ಟು ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸುವ ಕಾಮಗಾರಿ ಬಾಕಿ ಇದೆ. ಇದನ್ನು ತ್ವರಿತವಾಗಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
1,600 ಮೀಟರ್ ಯುಜಿಡಿ ಕಾಮಗಾರಿಯಲ್ಲಿ 600 ಮೀಟರ್ ಬಾಕಿ ಇದೆ. ಪೈಪ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವಿಳಂಬವಾಗಿತ್ತು. ಇದೀಗ ನಮ್ಮ ಬಳಿ 150 ಮೀಟರ್ ನಷ್ಟು ಪೈಪ್ ಲಭ್ಯವಿದೆ. ಉಳಿದ 450 ಮೀಟರ್ ನಷ್ಟು ಪೈಪ್ ಖರೀದಿಸಲು ತ್ವರಿತ ಕ್ರಮ ಕೈಗೊಳ್ಳಲಿದ್ದೇವೆ. ಜುಲೈ 15ರೊಳಗೆ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ಗುತ್ತಿಗೆದಾರರು ಸಭೆಗೆ ಮಾಹಿತಿ ನೀಡಿದರು. ಜೂನ್ 20ರೊಳಗೆ ನಿರಂತರ ನೀರು ಯೋಜನೆಯಡಿ ಪೈಪ್ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಎಲ್ ಆಂಡ್ ಟಿ ಕಂಪನಿಯ ಪ್ರತಿನಿಧಿ ತಿಳಿಸಿದರು.
ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯರಾದ ಚೇತನ ಹಿರೇಕೆರೂರ, ಎಸ್. ಸಂದಿಲ್ ಕುಮಾರ, ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ವಿಠ್ಠಲ ತುಬಾಕೆ, ಸಹಾಯಕ ಆಯುಕ್ತ ಚಂದ್ರೇಶೇಖರ ಮಾಲಿಪಾಟೀಲ, ಕೃಷ್ಣಾ ಗಂಡಗಾಳೇಕರ ಇದ್ದರು.