ಶೌಚಗೃಹದ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

30 HANUR 2
ಹನೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇಒ ಉಮೇಶ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಗುರುಲಿಂಗಯ್ಯ, ರಮೇಶ್, ಮಾದೇಶ್, ಸುರೇಶ್ ಇತರರು ಇದ್ದರು.
Published on

ಹನೂರು: ಶಾಲೆಗಳಲ್ಲಿ ಬಾಕಿ ಉಳಿದಿರುವ ಶೌಚಗೃಹದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಆ.15 ಸ್ವಾತಂತ್ರ್ಯ ದಿನಾಚರಣೆಯಂದು ಉದ್ಘಾಟಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ತಾಲೂಕು ಪಂಚಾಯಿತಿ ಇಒ ಉಮೇಶ್ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಿಕೆ ಸಂಬಂಧ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಶಾಲೆಗಳಿಗೆ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಹಾಗಾಗಿ ಕೊರತೆ ಇರುವ ಶಾಲೆಗಳಿಗೆ ನರೇಗಾ ಯೋಜನೆಯಡಿ ಶೌಚಗೃಹ, ಸುತ್ತುಗೋಡೆ, ಆಟದ ಮೈದಾನ ನಿರ್ಮಾಣ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಎಲ್ಲರ ಆದ್ಯ ಕರ್ತವ್ಯ. ಆದರೆ ತಾಲೂಕಿನ ಕೆಲವು ಶಾಲೆಗಳಲ್ಲಿ ಶೌಚಗೃಹದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇನ್ನು ಕೆಲವು ಶಾಲೆಗಳಲ್ಲಿ ಕಾಮಗಾರಿ ಆರಂಭಿಸದಿರುವುದು ನಿಜಕ್ಕೂ ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಗಾಗಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜತೆಗೆ ಮಂಜೂರಾಗಿರುವ ಶೌಚಗೃಹದ ಕಾಮಗಾರಿ ಆರಂಭಿಸಬೇಕು ಎಂದರು.

ಅಲ್ಲದೆ ಶೌಚಗೃಹ ಇಲ್ಲದಿರುವ ಶಾಲೆಗಳನ್ನು ಪಟ್ಟಿ ಮಾಡಿ ಹೆಚ್ಚುವರಿ ಕ್ರಿಯಾಯೋಜನೆ ತಯಾರಿಸಿ ಶೌಚಗೃಹ ನಿರ್ಮಿಸಿ ಕೊಡಬೇಕು. ಈ ಬಗ್ಗೆ ಅಗತ್ಯ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಇನ್ನು ಕೆಲವು ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಜನರಿಗೆ ಸಮರ್ಪಕವಾಗಿ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದ್ದರಿಂದ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಇನ್ನು ತಾಲೂಕಿನಲ್ಲಿ ಇ ಸ್ವತ್ತು ಆಗದ ಶಾಲೆಗಳಿಗೆ ಖಾತೆ ಮಾಡಿಕೊಡಬೇಕು. ಸ್ವಾತಂತ್ರ್ಯ ದಿನಾಚರಣೆಯಂದು ವಿತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

113 ಶಾಲೆಗಳಿಗೆ ಇ ಸ್ವತ್ತು ಇಲ್ಲ: ಬಿಇಒ ಗುರುಲಿಂಗಯ್ಯ ಮಾತನಾಡಿ, ಶೈಕ್ಷಣಿಕ ವಲಯದ ಆಂಡಿಪಾಳ್ಯ ಶಾಲೆಯಲ್ಲಿ ಶೌಚಗೃಹದ ಕಾಮಗಾರಿ ಅರ್ಧಕ್ಕೆ ನಿಂತು 6 ತಿಂಗಳು ಕಳೆದಿದೆ. ರಾಮಾಪುರ ಶಾಲೆಯಲ್ಲಿ ಶೌಚಗೃಹಕ್ಕೆ ನೀರಿನ ಸೌಕರ್ಯ ಕಲ್ಪಿಸಿಲ್ಲ. ಹುತ್ತೂರು ಶಾಲೆಯಲ್ಲಿ ಸುತ್ತುಗೋಡೆ ನಿರ್ಮಿಸಿಲ್ಲ. ಹಾಗೆಯೇ ಒಡೆಯರಪಾಳ್ಯ, ಭೈರನತ್ತ, ದಿನ್ನಳ್ಳಿ, ಅಂಬಿಕಾಪುರ, ಬಂಡಳ್ಳಿ, ಹಲಗಾಪುರ, ಶೆಟ್ಟಳ್ಳಿ ಸೇರಿದಂತೆ ಇನ್ನು ಕೆಲವು ಶಾಲೆಗಳಲ್ಲಿ ಶೌಚಗೃಹ ನಿರ್ಮಾಣಬೇಕಿದೆ. ಇನ್ನು ವಲಯದಲ್ಲಿ 171 ಸರ್ಕಾರಿ ಶಾಲೆಗಳಿದ್ದು, ಇದರಲ್ಲಿ 113 ಶಾಲೆಗಳಿಗೆ ಇ ಸ್ವತ್ತು ಆಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ತಿಳಿಸಿದರು.

ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕಿ ರಾಧ, ವ್ಯವಸ್ಥಾಪಕ ರಮೇಶ್, ಸಿಡಿಪಿಒ ಅಂಬಿಕಾ, ಶಿಕ್ಷಣ ಸಂಯೋಜಕ ಅಶೋಕ್, ಪಿಡಿಒಗಳಾದ ಸುರೇಶ್, ಮಾದೇಶ್, ವಿಶ್ವನಾಥ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net