ಟ್ಯಾಗಿಂಗ್​ ಕಾರ್ಯ ಪೂರ್ಣಗೊಳಿಸಿ

ceo
Published on

ಕೋಲಾರ: ಹಿಂದುಳಿದ ವರ್ಗಗಳ ಶೈಕ್ಷಣಿಕ ಸ್ಥಿತಿಗತಿಗಳ ಎರಡನೇ ಹಂತದ ಸಮೀಕ್ಷೆ ಸೆ.20ರಿಂದ ಅ.7ರವರೆಗೆ ನಡೆಯಲಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಗಣತಿದಾರರನ್ನು ನೇಮಿಸಿ ಪಟ್ಟಿ ಅಂತಿಮಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವಿಣ್​ ಪಿ.ಬಾಗೇವಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿವಿಧ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂಧನ ಇಲಾಖೆಯಿಂದ ಈಗಾಗಲೇ ಶೇ.80 ಮನೆಗಳಿಗೆ ಜಿಯೋ ಟ್ಯಾಗ್​ ಮಾಡಿ, ಸ್ಟಿಕರ್​ ಅಂಟಿಸಿ 150 ಮನೆಗಳಿಗೆ ಒಂದು ಬ್ಲಾಕ್​ನ್ನು ಗುರುತಿಸಿ, ರೂಟ್​ ಮ್ಯಾಪ್​ ಹಾಗೂ ಬ್ಲಾಕ್​ ಮ್ಯಾಪ್​ ಮಾಡುವ ಕಾರ್ಯ ಆರಂಭಿಸಲಾಗಿದ್ದು, ಸೆ.12 ರೊಳಗೆ ಟ್ಯಾಗಿಂಗ್​ ಕಾರ್ಯ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆ ಕಾರ್ಯ 65 ಪ್ರಶ್ನಾವಳಿಯನ್ನೊಳಗೊಂಡಿದ್ದು, ತಂತ್ರಾಂಶಗಳ ಮೂಲಕ ಸರ್ವೇ ಕಾರ್ಯವನ್ನು ಕೈಗೊಳ್ಳಬೇಕು. ಈ ಕುರಿತು ತಾಲೂಕುಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಿ ಸಮರ್ಪಕವಾಗಿ ಸಮೀಕ್ಷಾ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದರು.

ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ತಾಲೂಕುಮಟ್ಟದ ಸಮನ್ವಯ ಸಮಿತಿಯಲ್ಲಿ ತಹಸೀಲ್ದಾರ್​, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯರಾಗಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿರುವ 4,17,305 ಕುಟುಂಬಗಳ ಮನೆಗಳ ಆರ್​ ಆರ್​ ನಂಬರ್​ಗಳಿಗೆ ಜಿಯೋ ಟ್ಯಾಗಿಂಗ್​ ಮಾಡುವ ಮೂಲಕ ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಸಮೀಕ್ಷೆ ಕಾರ್ಯಕ್ಕಿಂತ ಮುನ್ನ ಆರ್​ ಆರ್​ ನಂಬರ್​ಗಳನ್ನು ಗುರುತಿಸುವ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕುಟುಂಬಗಳು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಇದರಿಂದ ಎರಡನೇ ಹಂತದಲ್ಲಿ ನಡೆಯುವ ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಕಾರ್ಯಗತಗೊಳಿಸಲು ಅನುಕೂಲವಾಗಲಿರುವುದರಿಂದ ಮೊದಲನೇ ಹಂತದ ಕಾರ್ಯ ಅತ್ಯಂತ ಅಚ್ಚುಕಟ್ಟಾಗಿ ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ. ಕೆ.ರಮೇಶ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ, ಜಿಲ್ಲಾ ಸಾಂಖಿಕ ಅಧಿಕಾರಿ ರಮೇಶ್​, ಕೋಲಾರ ನಗರಸಭೆ ಆಯುಕ್ತ ನವೀನ್​ ಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್​ ಇದ್ದರು.

ಮಾಸ್ಟರ್​ ಟ್ರೇನರ್​ಗಳ ನಿಯೋಜನೆ: ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಲಾಗಿದೆ. ಪ್ರತಿ 15 ರಿಂದ 20 ಗಣತಿದಾರರಿಗೆ ಒಬ್ಬರಂತೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಆರ್​ಸಿ, ಸಿಆರ್​ಸಿ ಗಳು ಮೇಲ್ವಿಚಾರಕರಾಗಿ ನಿಗಾ ವಹಿಸಬೇಕು. ಪ್ರತಿ 50 ಗಣತಿದಾರರಿಗೆ ಓರ್ವ ಮಾಸ್ಟರ್​ ಟ್ರೇನರ್​ ನಿಯೋಜನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net