

ಶಿರಸಿ: ನಗರದ ಐದು ರಸ್ತೆಯಿಂದ ಯಲ್ಲಾಪುರ ನಾಕಾವರೆಗೆ ರಸ್ತೆ ವಿಸ್ತರಣೆ ಕಾರ್ಯಕ್ಕೆ ಜಾಗ ಬಿಟ್ಟುಕೊಡಲು ಕೆಲವರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ತೆರಳಿದ್ದಾರೆ. ಪೌರಾಯುಕ್ತರು, ತಹಸೀಲ್ದಾರರು ನ್ಯಾಯಾಲಯಕ್ಕೆ ತೆರಳಿದವರೊಂದಿಗೆ ಸಭೆ ನಡೆಸಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.
ನಗರದ ಲೊಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಮಾರಿಕಾಂಬಾ ಜಾತ್ರೆಯ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರು ಯತ್ನಿಸಬೇಕು. ಒಂದೊಮ್ಮೆ ಸಾಧ್ಯವಾಗದಿದ್ದಲ್ಲಿ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಡ್ರೈನೇಜ್ ವ್ಯವಸ್ಥೆಗೆ ತೊಂದರೆ ಆಗಿದೆ. ಇದರಿಂದಾಗಿ ಸಾರ್ವಜನಿಕರೂ ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಮೊದಲು ಗಮನ ಹರಿಸಬೇಕು ಎಂದರು.
ಲೊಕೋಪಯೋಗಿ ಇಲಾಖೆ ಇಂಜನಿಯರ್ ಹನುಮಂತ ನಾಯ್ಕ ಸಭೆಗೆ ಮಾಹಿತಿ ನೀಡಿ, ಐದು ರಸ್ತೆಯಿಂದ ರಾಘವೇಂದ್ರ ಮಠ ಸರ್ಕಲ್ ಹಾಗೂ ಅಲ್ಲಿಂದ ಸಾಮ್ರಾಟ್ ವರೆಗೆ ಎರಡು ಹಂತದಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ. ಒಟ್ಟೂ ೧೫ ಕೋಟಿ ರೂ. ಕಾಮಗಾರಿ ಇದಾಗಿದೆ. ಈಗಾಗಲೇ ರಸ್ತೆ ವಿಸ್ತರಣೆ ಆಗುವ ಜಾಗಕ್ಕೆ ಗಡಿ ಗುರುತು ಹಾಕಿದ್ದೇವೆ. ಆದರೆ, ಮೂರು ಜನ ಭೂ ಮಾಲೀಕರು ರಸ್ತೆ ವಿಸ್ತರಣೆಗೆ ಜಾಗ ಬಿಟ್ಟುಕೊಡಲು ಸಿದ್ದರಿಲ್ಲದೇ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು.
ಡಿಎಫ್ಒ ಡಾ. ಅಜ್ಜಯ್ಯ ಜೆ. ಆರ್. ಮಾಹಿತಿನೀಡಿ, ರಸ್ತೆ ವಿಸ್ತರಣೆಯ ವೇಳೆ ಅರಣ್ಯ ಇಲಾಖೆಗೆ ಸೇರಿದ ಜಾಗ ಮತ್ತು ಕೆಲವೆಡೆ ಮರಗಳನ್ನೂ ತೆಗೆಯಬೇಕಾಗಿದೆ. ಇಲಾಖೆಯ ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರದ ಪರಿವೇಶ್ ತಂತ್ರಾಂಶದಲ್ಲಿ ದಾಖಲೆಗಳನ್ನು ದಾಖಲಿಸಿದ್ದು, ಮೊದಲ ಹಂತದ ಅಪ್ರೋವಲ್ ಸಿಕ್ಕಿದೆ. ಈಗ ಜಾಗದ ಪರಿಹಾರವಾಗಿ ಲೊಕೋಪಯೋಗಿ ಇಲಾಖೆ ಆನ್ ಲೈನ್ ಮೂಲಕ ಪರಿಹಾರವನ್ನು ಇಲಾಖೆಗೆ ತುಂಬಬೇಕಿದ್ದು, ಪ್ರಕ್ರಿಯೆ ಪೂರ್ಣಗೊಂಡ ತಕ್ಷಣದಲ್ಲಿಯೇ ಮರಗಳನ್ನು ತೆಗೆದು ಜಾಗ ಬಿಟ್ಟುಕೊಡಲು ಅನುಮತಿ ಸಿಗಲಿದೆ ಎಂದರು.
ಬಳಿಕ ಮಾತನಾಡಿದ ಭೀಮಣ್ಣ, ರಸ್ತೆ ವಿಸ್ತರಣೆಯ ಜಾಗದಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಹೆಸ್ಕಾಂ ಕಾರ್ಯಪ್ರವೃತ್ತವಾಗಬೇಕು. ಕೆಲವೆಡೆ ಶಾಲೆಗಳ ಎದುರೇ ವಿದ್ಯುತ್ ಕಂಬಗಳಿದ್ದು, ವಾಹನ ಬಡಿದು ಧಕ್ಕೆ ಆದರೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಾರೆ. ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ ಇತರರಿದ್ದರು.
ಇದನ್ನೂ ಓದಿ: ಸಾಲದ ಬಾಧೆ ಮೀನುಗಾರ ಆತ್ಮಹತ್ಯೆ