

ವಿಜಯಪುರ : ಜಿಲ್ಲೆಯ ಎಲ್ಲ 13 ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಸತಿ ರಹಿತರಿಗೆ ಮನೆ ಕಟ್ಟಲು ಆಯ್ಕೆ ಪ್ರಕ್ರಿಯೆ ಪೂರ್ಣವಾದ ಫಲಾನುಭವಿಗಳ ಖಾತೆಗೆ ನೇರವಾಗಿ ಸರ್ಕಾರದ ಅನುದಾನ ಜಮೆ ಆಗುತ್ತಿದೆ. ಆದರೆ, ಗುರಿಗೆ ತಕ್ಕಂತೆ ಆಯ್ಕೆ ಪ್ರಕ್ರಿಯೇ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಫಲಾನುಭವಿಗಳ ಆಯ್ಕೆ ಪೂರ್ಣಗೊಳಿಸಿ ಜಿಪಿಎಸ್ ಮಾಡಿಸಿ ಅನುದಾನ ಜಮೆ ಆಗುವಂತೆ ಪಿಡಿಒಗಳಿಗೆ ನಿರ್ದೇಶನ ನೀಡುವಂತೆ ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಮಂಗಳವಾರ ಜಿ.ಪಂ. ಸಿಇಒ ರಿಷಿ ಆನಂದ ಅವರಿಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 219 ಗ್ರಾ.ಪಂ. ಗಳ ವ್ಯಾಪ್ತಿಯಲ್ಲಿ 33074 ಗುರಿ ನಿಗದಿ ಪಡಿಸಲಾಗಿದೆ. ಅದರಂತೆ ವಿಜಯಪುರ ತಾಲೂಕಿನ 17 ಗ್ರಾ.ಪಂಗಳಲ್ಲಿ 2461, ಬಬಲೇಶ್ವರ ತಾಲೂಕಿನ 15 ಗ್ರಾ.ಪಂ.ಗಳಲ್ಲಿ 2229, ತಿಕೋಟಾ ತಾಲೂಕಿನ 14 ಗ್ರಾ.ಪಂ.ಗಳಲ್ಲಿ 2483, ಚಡಚಣ ತಾಲೂಕಿನ 13 ಗ್ರಾ.ಪಂ.ಗಳಲ್ಲಿ 2083, ನಿಡಗುಂದಿ ತಾಲೂಕಿನ 11 ಗ್ರಾ.ಪಂ.ಗಳಲ್ಲಿ 1094, ಇಂಡಿ ತಾಲೂಕಿನ 39 ಗ್ರಾ.ಪಂ. ಗಳಲ್ಲಿ 5728, ಬಸವನಬಾಗೇವಾಡಿ ತಾಲೂಕಿನ 18 ಗ್ರಾ.ಪಂ.ಗಳಲ್ಲಿ 2758, ಸಿಂದಗಿ ತಾಲೂಕಿನ 18 ಗ್ರಾ.ಪಂ ಗಳಲ್ಲಿ 1997, ದೇವರ ಹಿಪ್ಪರಗಿ ತಾಲೂಕಿನ 14 ಗ್ರಾ.ಪಂ.ಗಳಲ್ಲಿ 2446, ಮುದ್ದೇಬಿಹಾಳ ತಾಲೂಕಿನ 22 ಗ್ರಾ.ಪಂ.ಗಳಲ್ಲಿ 3921, ತಾಳಿಕೋಟಿ ತಾಲೂಕಿನ 14 ಗ್ರಾ.ಪಂ.ಗಳಲ್ಲಿ 2372, ಆಲಮೇಲ ತಾಲೂಕಿನ 13 ಗ್ರಾ.ಪಂ.ಗಳಲ್ಲಿ 1842 ಹಾಗೂ ಕೊಲ್ಹಾರ ತಾಲೂಕಿನ 11 ಗ್ರಾ.ಪಂ.ಗಳಲ್ಲಿ 1702 ಗುರಿ ನಿಗದಿ ಪಡಿಸಲಾಗಿದೆ ಎಂದು ಸುನೀಲಗೌಡರು ತಿಳಿಸಿದ್ದಾರೆ.
ಪಿಡಿಒಗಳಿಗೆ ನಿರ್ದೇಶನ ನೀಡಿ ಕೂಡಲೇ ಜಿಲ್ಲೆಯ ಎಲ್ಲ ಗ್ರಾ.ಪಂ. ಗಳ ವ್ಯಾಪ್ತಿಯಲ್ಲಿ ಜಿಪಿಎಸ್ ನಡೆಸಿ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದ ಪ್ರತಿಯನ್ನು ವಿ.ಪ. ಸದಸ್ಯರ ಕಚೇರಿಗೆ ಸಲ್ಲಿಸುವಂತೆ ಜಿ.ಪಂ. ಸಿಇಒ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.