

ಚನ್ನರಾಯಪಟ್ಟಣ: ಕಬ್ಬು ಬೆಳೆಗಾರರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಶೀಘ್ರವೇ ನವೀಕರಣ ಕಾಮಗಾರಿ ಪೂರ್ಣಗೊಳಿಸಿ ಕಬ್ಬು ಅರೆಯುವಿಕೆ ಕಾರ್ಯ ಪ್ರಾರಂಭಿಸಬೇಕು ಎಂದು ಕಾರ್ಮಿಕ ಹಾಗೂ ಸಕ್ಕರೆ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ಸೂಚಿಸಿದರು.
ತಾಲೂಕಿನ ಶ್ರೀನಿವಾಸಪುರ ಬಳಿಯಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಮಂಗಳವಾರ ಭೇಟಿ ನೀಡಿ ನವೀಕರಣ ಕಾಮಗಾರಿ ಪರಿಶೀಲಿಸಿದ ಸಚಿವರು, ಕೆಲಸ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ನವೀಕರಣ ಕಾಮಗಾರಿ ಯಾವಾಗ ಪ್ರಾರಂಭವಾಯ್ತು ? ಯಾವಾಗ ಮುಗಿಯಬೇಕಿತ್ತು ? ಲೀಸ್‌ನ ಬಾಕಿ ಹಣ ತುಂಬಿಸುವುದು ಯಾವಾಗ? ವಿಳಂಬಕ್ಕೆ ಕಾರಣ ಏನೆಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸರ್ಕಾರಕ್ಕೆ ಇನ್ನೂ ಅಪ್ಪ-ತಾಯಿ ಎಂದು ಬೇಡುವ ಸ್ಥಿತಿಗೆ ಬಂದಿಲ್ಲ. ಬೆಂಗಳೂರು ವಿಕಾಸಸೌಧದಲ್ಲಿ ಬುಧವಾರ ಸಂಜೆ 4.30ಕ್ಕೆ ಸಭೆ ಕರೆಯಲಾಗಿದ್ದು, ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಭಾಗವಹಿಸಿ ಕಾಮಗಾರಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, 2 ವರ್ಷಗಳ ಹಿಂದೆಯೇ ಕಾರ್ಖಾನೆಯಲ್ಲಿ ಕಬ್ಬು ಹರಿಯುವ ಕಾರ್ಯ ಪ್ರಾರಂಭವಾಗಬೇಕಿತ್ತು. ಆದರೆ ಕಳೆದ ವರ್ಷ ಡಸ್ಟ್ ಕ್ಯಾಚರ್ ಕುಸಿದ ಪರಿಣಾಮ ಸ್ವಲ್ಪ ವಿಳಂಬವಾಗಿದೆ. ಸೆಪ್ಟೆಂಬರ್ ಮೊದಲ ವಾರದಿಂದಲೇ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಚಿವರಿಗೆ ತಾಲೂಕು ಕಬ್ಬು ಬೆಳೆಗಾರರು ಮನವಿ ಪತ್ರ ನೀಡಿದರು. ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ನಾಗಣ್ಣ, ಕೃಷ್ಣೇಗೌಡ ಮತ್ತು ಚಂದ್ರಣ್ಣ, ತಹಸೀಲ್ದಾರ್ ಜೆ.ಬಿ.ಮಾರುತಿ, ಪ್ರಮುಖರಾದ ಚನ್ನಕೇಶವ, ಅಣತಿ ಆನಂದ್, ಪ್ರವೀಣ್, ಪಿಎಸ್‌ಐ ಕಿರಣ್ ಕುಮಾರ್ ಇತರರಿದ್ದರು.