

ಶಿವಮೊಗ್ಗ: ಸಿಗಂದೂರು ಸೇತುವೆ, ಚಿತ್ರದುರ್ಗ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಹಾಗೂ ಸಾಗರದಲ್ಲಿ ಚತುಷ್ಪಥ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೂಚಿಸಿದರು.
ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಎನ್‌ಎಚ್‌ಎ ಡೈರೆಕ್ಟರ್ ಜನರಲ್ ಧರ್ಮೇಂದ್ರ ಸಾರಂಗಿ ಹಾಗೂ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿ ಯೋಜನೆಗಳಿಗೆ ವೇಗ ನೀಡಬೇಕು ಎಂದು ಸೂಚಿಸಿದರು.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ, ಶಿವಮೊಗ್ಗ-ಆನಂದಪುರ ಚತುಷ್ಪಥ, ನೆಲ್ಲಿಸರ-ತೀರ್ಥಹಳ್ಳಿ ಚತುಷ್ಪಥ, ಬೈಂದೂರು- ನಾಗೋಡಿ ದ್ವಿಪಥ ರಸ್ತೆ ಹಾಗೂ ಹೊಸೂರು, ತಾಳಗುಪ್ಪದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದರು.
2024-25ನೇ ಸಾಲಿನಲ್ಲಿ ಮಂಜೂರಾದ ಆಗುಂಬೆ ರಸ್ತೆ, ಆನಂದಪುರ-ತಾಳಗುಪ್ಪ ರಸ್ತೆ, ಸಾಗರ-ಮರಕುಟಕವರೆಗಿನ ರಸ್ತೆ ಹಾಗೂ ಬೈಂದೂರು-ರಾಣೆಬೆನ್ನೂರು ಮಾರ್ಗದಲ್ಲಿ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗೆ ಸಂಬಂಧಿಸಿ ಡಿಪಿಆರ್‌ಗಳಿಗೆ ಮಂಜೂರಾತಿ ಪಡೆಯಬೇಕು ಎಂದು ತಿಳಿಸಿದರು.
ಮೇಗರವಳ್ಳಿ-ಸೋಮೇಶ್ವರ ಮಾರ್ಗದಲ್ಲಿ ಆಗುಂಬೆ ಘಾಟಿಗೆ ಪರ್ಯಾಯವಾಗಿ ನಾಲ್ಕು ಪಥದ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯ ಸಾಧ್ಯತೆ ವರದಿಯನ್ನು ಸಲ್ಲಿಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ. ಕೇಂದ್ರ ಭೂ ಸಾರಿಗೆ ಪ್ರಾದೇಶಿಕ ಅಧಿಕಾರಿ ನರೇಂದ್ರ ಶರ್ಮಾ, ಅಧೀಕ್ಷಕ ಇಂಜಿನಿಯರ್ ರಾಜೇಶ್, ಕಾರ್ಯಪಾಲಕ ಇಂಜಿನಿಯರ್ ದಿವಾಕರ್ ಇತರರಿದ್ದರು.