ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ

commissionervisit
Published on

ಬೆಂಗಳೂರು: ದಾಸರಹಳ್ಳಿ ವಲಯದ ನೆಲಗದರನಹಳ್ಳಿ ಮುಖ್ಯರಸ್ತೆ ಅಗಲೀಕರಣ ಯೋಜನೆ ಸೇರಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಾಸರಹಳ್ಳಿ ವಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಡಿ ಅಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನೆಲಗದರನಹಳ್ಳಿ ರಸ್ತೆಯು ತುಮಕೂರು ಮುಖ್ಯ ರಸ್ತೆಯಿಂದ ಗಂಗಾ ಇಂಟರ್ ನ್ಯಾಷನಲ್ ಸ್ಕೂಲ್ ವರೆಗೆ ಸುಮಾರು 2.45 ಕಿ.ಮೀ .ಇದ್ದು, ಈ ಹಿಂದೆ ಇದ್ದ 30-40 ಅಡಿ ಅಗಲದ ರಸ್ತೆಯನ್ನು 60 ಅಡಿಗೆ ಅಗಲೀಕರಣ ಮಾಡಲಾಗುತ್ತದೆ. ಈ ಸಂಬಂಧ ಈಗಾಗಲೇ 1.2 ಕಿ.ಮೀ. ರಸ್ತೆ ಅಗಲೀಕರಣ ಮಾಡಿ ಡಾಂಬರೀಕರಣ ಮಾಡಲಾಗಿದ್ದು, ಬಾಕಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಅಬ್ಬಿಗೆರೆ ಕೆರೆ ಪರಿಶೀಲನೆ:

ಅಬ್ಬಿಗೆರೆ ಕೆರೆ 45 ಎಕರೆ ಪ್ರದೇಶದಲ್ಲಿದ್ದು, 4.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆ ಕಾಮಗಾರಿಯಲ್ಲಿ ಈಗಾಗಲೇ ಹೂಳೆತ್ತುವ ಕಾರ್ಯ, ಸೀವೇಜ್ ಡೈವರ್ಷನ್ ಡ್ರೈನ್, ಬಂಡ್ ನಿರ್ಮಿಸುವ ಕೆಲಸ ಪೂರ್ಣಗೊಳಿಸಲಾಗಿದೆ. ಬೇಲಿ ಅಳವಡಿಕೆ, ಶೌಚಾಲಯ, ಭದ್ರತಾ ಸಿಬ್ಬಂದಿಯ ಕೊಠಡಿ ಹಾಗೂ ಪ್ರವೇಶ ದ್ವಾರದ ಕಾಮಗಾರಿ ಬಾಕಿಯಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಿದರು.

ಬೀದಿನಾಯಿಗಳ ಎಬಿಸಿ ಸೆಂಟರ್ ಪರಿಶೀಲನೆ:

ಶೆಟ್ಟಿಹಳ್ಳಿಯಲ್ಲಿ ಸಂತಾನ ಹರಣ ಶಸ್ತ ಚಿಕಿತ್ಸೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಎಬಿಸಿ ಮಾಡಲು 54 ಕೆನಲ್ಸ್ ಗಳಿದ್ದು, 5 ಐಸೋಲೇಷನ್ ಸೆಂಟರ್‌ಗಳಿವೆ. ದಾಸರಹಳ್ಳಿ ಹಾಗೂ ಆರ್.ಆರ್.ನಗರ ವಲಯದ ಬೀದಿ ನಾಯಿಗಳಿಗೆ ಇಲ್ಲಿ ಎಬಿಸಿ ಮಾಡಲಾಗುತ್ತಿದೆ. 33 ಲಕ್ಷ ರೂ. ವೆಚ್ಚದಲ್ಲಿ ಕೇಂದ್ರದ ದುರಸ್ತಿ ಹಾಗೂ ಇನ್ನಿತರ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ದಾಸರಹಳ್ಳಿ ವಲಯ ಆಯುಕ್ತ ಗಿರೀಶ್, ಜಂಟಿ ಆಯುಕ್ತ ಪ್ರೀತಮ್ ನಸಲಾಪುರ್, ಮುಖ್ಯ ಅಭಿಯಂತರ ರವಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ನಾಗಸಂದ್ರ ಹಾವನೂರು ಬಡಾವಣೆಯಲ್ಲಿ ಜಲಮಂಡಳಿಯು ಒಳಚರಂಡಿಯ ಕೊಳವೆ ಅಳವಡಿಕೆ ಕಾಮಗಾರಿ ಭಾಗವನ್ನು ದುರಸ್ತಿ ಮಾಡದ ಕಾರಣ ಪಾಲಿಕೆ ವತಿಯಿಂದಲೇ ರಸ್ತೆ ಕತ್ತರಿಸಿರುವ ಭಾಗಕ್ಕೆ ಡಾಂಬರೀಕರಣ ಮಾಡುವುದನ್ನು ಪರಿಶೀಲಿಸಿದರು. 25 ಕೋಟಿ ರೂ. ವೆಚ್ಚದಲ್ಲಿ ಶೆಟ್ಟಿಹಳ್ಳಿ ಹಾಗೂ ಬಾಗಲಗುಂಟೆಯ ವಾಡ್​​​ರ್ ರಸ್ತೆಗಳು ಹಾಗೂ ಅಡ್ಡರಸ್ತೆಗಳ ಡಾಂಬರೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ರುದ್ರಭೂಮಿಗೆ ಕಾಂಪೌಂಡ್ ಗೋಡೆ ನಿರ್ಮಿಸಿ:

ಅಬ್ಬಿಗೆರೆ ಫಾರೆಸ್ಟ್ ರಸ್ತೆಯ ಅಗಲೀಕರಣದ ವೇಳೆ ರುದ್ರಭೂಮಿ ಗೋಡೆಯನ್ನು ತೆರವುಗೊಳಿಸಲಾಗಿದೆ. ಆ ಗೋಡೆಯನ್ನು ಗುತ್ತಿಗೆದಾರರ ಮೂಲಕ ಕೂಡಲೇ ನಿರ್ಮಾಣ ಮಾಡಬೇಕು. ಜತೆಗೆ ಸಾರ್ವಜನಿಕರಿಗೆ ಅನಾನುಕೂಲ ಆಗುವ ಸ್ಥಳಗಳಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net