ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ

New Tenginakayi mahesh New
Published on

ಹುಬ್ಬಳ್ಳಿ : ಧಾರವಾಡ-ಬೆಳಗಾವಿ (ಮಾರ್ಗ ಕಿತ್ತೂರು) ನೇರ ರೈಲು ಮಾರ್ಗಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಶೀಘ್ರ ಪೂರ್ಣಗೊಳಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸಿರುವ ಶಾಸಕ ಮಹೇಶ ಟೆಂಗಿನಕಾಯಿ, ಗಾಮನಗಟ್ಟಿಯಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಸ್ಥಾಪನೆ, ಹುಬ್ಬಳ್ಳಿಯನ್ನು ಪ್ರವಾಸೋದ್ಯಮದ ಕ್ಲಸ್ಟರ್ ಹಬ್ ಮಾಡುವುದು ಸೇರಿದಂತೆ ಈ ಭಾಗದ ಪ್ರಮುಖ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.

ರೈಲ್ವೆ ಅಧಿಕಾರಿಗಳು ಸಹ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ವಣಕ್ಕೆ ಉತ್ಸುಕತೆ ಹೊಂದಿದ್ದಾರೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ನಿಧಾನವಾಗಿ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ರಾಜ್ಯ ಸರ್ಕಾರವು ಸಹ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಹುಬ್ಬಳ್ಳಿ - ಧಾರವಾಡ ಸಮೀಪದ ಮುಮ್ಮಿಗಟ್ಟಿಯಲ್ಲಿ ಎಫ್​ಎಂಸಿಜಿ ಕ್ಲಸ್ಟರ್, ಕೊಪಳ್ಳದಲ್ಲಿ ಆಟಿಕೆ ತಯಾರಿಕೆ ಕ್ಲಸ್ಟರ್, ಬೆಳಗಾವಿಯಲ್ಲಿ ಏರೋಫೇಸ್ ಕ್ಲಸ್ಟರ್ ನಿರ್ಮಾಣ ಬಗ್ಗೆ ಕಳೆದ ಅಧಿವೇಶನದಲ್ಲಿ ಚರ್ಚೆಯಾಗಿದ್ದರೂ ಯಾವುದೂ ಅನುಷ್ಠಾನಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಮ್ಮಿಗಟ್ಟಿಯಲ್ಲಿ ಕಳೆದ ಬಾರಿ ಎಫ್​ಎಂಸಿಜಿ ಕ್ಲಸ್ಟರ್​ಗಾಗಿ ಪ್ರತಿ ಎಕರೆಗೆ 98 ಲಕ್ಷ ರೂ. ವೆಚ್ಚದಲ್ಲಿ ಜಾಗ ನೀಡಲು ತೀರ್ವನಿಸಲಾಗಿತ್ತು. ಇದೀಗ ಭೂಮಿಯ ವೆಚ್ಚ 1.48 ಕೋಟಿ ರೂ. ಪ್ರತಿ ಎಕರೆಗೆ ಏರಿಕೆಯಾಗಿದೆ. ಕಳೆದ ಬಾರಿ 50 ಕೈಗಾರಿಕೆಗಳು ಮುಮ್ಮಿಗಟ್ಟಿಯಲ್ಲಿ ಕೈಗಾರಿಕೆ ಪ್ರಾರಂಭಕ್ಕೆ ಉತ್ಸುಕತೆ ತೋರಿದ್ದವು. ದರ ಏರಿಕೆಯಿಂದಾಗಿ ಇದೀಗ 9 ಕಂಪನಿಗಳು ಮಾತ್ರ ಕೈಗಾರಿಕೆ ಪ್ರಾರಂಭಕ್ಕೆ ಉತ್ಸುಕತೆ ತೋರಿವೆ ಎಂದರು.

ಅಸ್ಸಾಂನಲ್ಲಿ ಎಫ್​ಎಂಸಿಜಿ ಕ್ಲಸ್ಟರ್​ಗಳಿಗೆ ನೀಡಿದ್ದ ಸೌಲಭ್ಯದ ಅವಕಾಶ 2026ರಲ್ಲಿ ಪೂರ್ಣಗೊಳ್ಳಲಿದ್ದು, ಅಲ್ಲಿನ ಕೈಗಾರಿಕೆಗಳನ್ನು ಕರ್ನಾಟಕದತ್ತ ಸೆಳೆಯಲು ಸರ್ಕಾರ ಮುಂದಾಗಬೇಕು. ಆ ಮೂಲಕ ಈ ಭಾಗದಲ್ಲಿ ಉದ್ಯೋಗಾವಕಾಶ ಸೃಷ್ಟಿ ಮಾಡಬೇಕು ಎಂದು ಆಗ್ರಹಿಸಿದರು.

ಐಟಿ-ಬಿಟಿ ಕಂಪನಿಗಳನ್ನು ಧಾರವಾಡ, ಕಲಬುರ್ಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು. ಆ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸಬೇಕು. ಹುಬ್ಬಳ್ಳಿಯಲ್ಲಿ ಇನ್​ಫೋಸಿಸ್​ಗೆ ಜಾಗ ನೀಡಲಾಗಿದ್ದು, ಅವರು ಪೂರ್ಣ ಪ್ರಮಾಣದಲ್ಲಿ ಕೆಲಸ ಪ್ರಾರಂಭಿಸುವಂತೆ ಸರ್ಕಾರ ಸೂಚಿಸಬೇಕು ಎಂದರು.

ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಕೆಎಂಸಿಆರ್​ಐ (ಕಿಮ್್ಸ)ನಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇರ್ ಸೆಂಟರ್ ಸ್ಥಾಪಿಸಬೇಕು. ಎಸ್​ಎಸ್​ಕೆ ಸಮಾಜಕ್ಕೆ ಪ್ರತ್ಯೇಕ ನಿಗಮ-ಮಂಡಳಿ ರಚಿಸಿ, 200 ಕೋಟಿ ರೂ. ಮೀಸಲಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಟೂರಿಸ್ಟ್ ಕ್ಲಸ್ಟರ್ ಹಬ್ : ಹುಬ್ಬಳ್ಳಿ ಸುತ್ತಲಿನ 60-70 ಕಿಮೀ ಅಂತರದಲ್ಲಿ ಪ್ರವಾಸೋದ್ಯಮ ಕೇಂದ್ರಗಳಿವೆ. ಹುಬ್ಬಳ್ಳಿಯಲ್ಲಿಯೂ ನೃಪತುಂಗ ಬೆಟ್ಟ, ಚಂದ್ರಮೌಳೇಶ್ವರ ದೇವಸ್ಥಾನ, ಸಿದ್ಧಾರೂಢಮಠ, ಮೂರುಸಾವಿರಮಠಗಳಿವೆ. ಹೀಗಾಗಿ, ಹುಬ್ಬಳ್ಳಿಯನ್ನು ಪ್ರವಾಸೋದ್ಯಮದ ಕ್ಲಸ್ಟರ್ ಹಬ್ ಅನ್ನಾಗಿ ಘೋಷಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಸರ್ಕಾರವನ್ನು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net