ಜೆಜೆಎಂ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿ

KDR gp
ತಂಗಲಿ ಗ್ರಾಪಂ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ರಘುರಾಮ್, ಸುನೀಲ್‌ಕುಮಾರ್, ಜ್ಯೋತಿ, ಸದಸ್ಯರು ಇದ್ದರು.
Published on

ಕಡೂರು: ತಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ (ಜಲಜೀವನ್ ಮಿಷನ್) ಕಾಮಗಾರಿ ಅಪೂರ್ಣಗೊಳಿಸಿರುವುದರಿಂದ ಜನರು ಬಿದ್ದು ಗಾಯಗೊಂಡಿದ್ದಾರೆ. ಗುಂಡಿ ಮುಚ್ಚಿ ಸರಿಪಡಿಸಬೇಕು ಎಂದು ಸದಸ್ಯ ಬಿ.ಟಿ.ಗಂಗಾಧರ್‌ನಾಯ್ಕ ಒತ್ತಾಯಿಸಿದರು.

ಬುಧವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಪ್ರಾಣಹಾನಿಯೂ ಆಗಿದೆ. ಅವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಕಡೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿಗಾಗಿ ತಂಗಲಿ ಗ್ರಾಮದಲ್ಲಿ ತಳಪಾಯ ಹಾಕಲಾಗಿದೆ. ಬಳಿಕ ಜಾಗವನ್ನು ಬೇರೆಯವರಿಗೆ ಇ-ಸ್ವತ್ತು ಮಾಡಲಾಗಿದೆ. ಗ್ರಾಪಂನಿಂದ ಇ-ಸ್ವತ್ತು ರದ್ದುಪಡಿಸಬೇಕು. ವಿ.ಎಲ್. ನಗರದಲ್ಲಿ ಸ್ಮಶಾನಕ್ಕೆಂದು ಡಿಸಿ ಸರ್ವೇ ನಂ 72ರಲ್ಲಿ 1.33 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಆ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಮಂಜೂರಾಗಿರುವ ಉದ್ದೇಶಕ್ಕೆ ಬಳಕೆಯಾಗುವಂತೆ ಇದುವರೆಗೂ ಮಾಡಲು ಸಾಧ್ಯವಾಗಿಲ್ಲ. ಒತ್ತುವರಿ ತೆರವುಗೊಳಿಸಿ ಸ್ಮಶಾನ ಜಾಗ ಉಳಿಸಿಕೊಡಬೇಕೆಂದು ಆಗ್ರಹಿಸಿದರು.
ಪಿಡಿಒ ಸುನೀಲ್‌ಕುಮಾರ್ ಮಾತನಾಡಿ, ವಿ.ಎಲ್.ನಗರವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ ನಂತರ ಅಲ್ಲಿರುವ ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಅದು ಗೋಮಾಳ ಎಂದು ನಮೂದಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಈ ಕುರಿತು ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಗಂಗಾಧರ್‌ನಾಯ್ಕ ಮಾತನಾಡಿ, ವಿ.ಎಲ್. ನಗರದ ಗೋಕಟ್ಟೆ ಒತ್ತುವರಿ ಮಾಡಲಾಗಿದೆ. ಡಿಸಿಗೂ ಮನವಿ ನೀಡಲಾಗಿದೆ. ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಸಂಬಂಧಿಸಿದವರಿಗೆ ನೋಟಿಸ್ ನೀಡುವಂತೆ ಪಿಡಿಒ ಅವರು ಗ್ರಾಪಂ ಕಾರ್ಯದರ್ಶಿ ಸುಶ್ಮಿತಾ ಅವರಿಗೆ ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ತುರ್ತು ವಿಚಾರಗಳು ಮಾತ್ರ ಸಭೆಯಲ್ಲಿ ಪ್ರಸ್ತಾಪಗೊಂಡವು. ಅಧ್ಯಕ್ಷ ರಘುರಾಮ್, ಉಪಾಧ್ಯಕ್ಷೆ ಎಸ್.ಜ್ಯೋತಿ, ಟಿ.ರಮೇಶ್, ಕಾವೇರಿಬಾಯಿ, ಕೆ.ಆರ್.ಗಿರೀಶ್, ವಿಜಯಾಬಾಯಿ, ಪರಮೇಶ್ವರಪ್ಪ, ಸುಧಾ, ಆರತಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net