ಮಲ್ಲಿಪಟ್ಟಣ, ರಂಗೇನಹಳ್ಳಿ ಏತನೀರಾವರಿ ಪೂರ್ಣಗೊಳಿಸಿ

19ark- 1
ಎ.ಮಂಜು
Published on

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹಾಗೂ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ಎ.ಮಂಜು ಆಗ್ರಹಿಸಿದರು.

ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಕಲಾಪದಲ್ಲಿ ದನಿ ಎತ್ತಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ವೇಳೆ ಹಳ್ಳಿಮೈಸೂರು ಹೋಬಳಿ ರಂಗೇನಹಳ್ಳಿ ಏತನೀರಾವರಿ ಯೋಜನೆಗೆ ಅನುಮೋದನೆ ನೀಡಿ ನಾಲೆಯಲ್ಲಿ ನೀರೆತ್ತಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ಇದರಿಂದ ರೈತರ ಜಮೀನಿಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಸಾಕಾಗುವುದಿಲ್ಲ ಎಂದು ಮನಗಂಡು ನಾನು ಹೊಳೆ ಮೂಲಕ ನೀರೆತ್ತಿ ಯೋಜನೆ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕಾಮಗಾರಿ ಆರಂಭವಾಗಿ ದಶಕಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಹಿಂದುಳಿದ ವರ್ಗಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಭಾಗದ ರೈತರಿಗೆ ಇಂದಿಗೂ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗಿಲ್ಲ. ಕಾಮಗಾರಿಗೆ 11 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲು ರೈತರು ಅಡ್ಡಿಪಡಿಸುತ್ತಿರುವುದಾಗಿ ಹಾರಿಕೆ ಉತ್ತರ ನೀಡಲಾಗುತ್ತಿದೆ. ಆದರೆ ಕಾನೂನಿನ್ವಯ ಭೂ ಸ್ವಾಧೀನಪಡಿಸಿಕೊಳ್ಳುವ ಜಮೀನು ದರದ ನಾಲ್ಕು ಪಟ್ಟು ಹಣ ಕಾಯ್ದಿರಿಸಿ ಕಾಮಗಾರಿ ನಡೆಸಲು ಅವಕಾಶವಿದೆ. ಕುಂಟುನೆಪ ಹೇಳಿಕೊಂಡು ಕಾಮಗಾರಿ ಅನುಷ್ಠಾನಗೊಳಿಸಿಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ಆರಂಭವಾದ ಕಾಮಗಾರಿಯನ್ನು ಪೂರ್ಣಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಹೇಮಾವತಿ ನದಿ ಹಿನ್ನೀರಿನ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕೂಡ ತೆವಳುತ್ತಿದೆ. ಇಂದಿಗೂ ಜಾಕ್‌ವೆಲ್ ಕಾಮಗಾರಿ ಮುಗಿದಿಲ್ಲ. ಕಾಮಗಾರಿ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಬದ್ಧತೆ ಇಲ್ಲ. ಒಂದು ಕಡೆ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದು, ಗುತ್ತಿಗೆದಾರರಿಗೆ ಚಾಟಿ ಬೀಸುವ ಕೆಲಸ ಮಾಡುತ್ತಿಲ್ಲ. 190 ಕೋಟಿ ರೂ. ವೆಚ್ಚದ ಯೋಜನೆಗೆ ಮೊದಲ ಹಂತದಲ್ಲಿ 120 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಎರಡನೇ ಹಂತದ 70 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು. ಇದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಕಾಲಮಿತಿಯೊಳಗೆ ಕಾಮಗಾರಿಗಳನ್ನು ಮುಗಿಸದಿದ್ದರೆ ಹೋರಾಟ ನಡೆಸುವುದಾಗಿ ಶಾಸಕರು ಸಭೆಯಲ್ಲಿ ಗುಡುಗಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಭೈರೇಗೌಡ, ರಂಗೇನಹಳ್ಳಿ ಮತ್ತು ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಬಂಧ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net