

ಹುಬ್ಬಳ್ಳಿ : ಇಲ್ಲಿನ ಬಸವವನದಿಂದ ಹಳೇ ಕೋರ್ಟ್ ವೃತ್ತದವರೆಗೆ ಫ್ಲೈ ಓವರ್ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದ್ದು, ಮುಂಬರುವ ಗಣೇಶ ಚತುರ್ಥಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಆಗಸ್ಟ್ 30ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಸೂಚನೆ ನೀಡಿದ್ದಾರೆ.
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಬೆಳಗ್ಗೆ ಹಳೇ ಬಸ್ ನಿಲ್ದಾಣ ಎದುರಿನ ಬಸವವನದಿಂದ ಹಳೇ ಕೋರ್ಟ್ ವೃತ್ತದವರೆಗಿನ ಫ್ಲೈ ಓವರ್ ಕಾಮಗಾರಿ ಪರಿಶೀಲಿಸಿದ ಅವರು, ಈ ಅವಧಿಯಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಇನ್ನೂ ಸಾಕಷ್ಟು ಬಾಕಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ವಿುಕರ ಕೊರತೆಯಿಂದಾಗಿ ನಿಗದಿತ ಅವಧಿಗಿಂತ 10-15 ದಿನಗಳಷ್ಟು ಕಾಮಗಾರಿ ಹಿಂದಿದೆ ಎಂಬ ಗುತ್ತಿಗೆದಾರರ ಉತ್ತರಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನೂ ನೂರು ಕಾರ್ವಿುಕರನ್ನು ಕೆಲಸಕ್ಕೆ ಹಚ್ಚುವ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಲೇಬೇಕು ಎಂದು ಸೂಚಿಸಿದರು.
4 ತಿಂಗಳೊಳಗೆ ಈ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲಾಗುವುದೆಂದು ಇಲ್ಲಿನ ವ್ಯಾಪಾರಸ್ಥರಿಗೆ ಭರವಸೆ ನೀಡಿ, ಹಳೇ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಬಸವವನದಿಂದ ಹಳೇ ಕೋರ್ಟ್ ವೃತ್ತದವರೆಗಿನ ಫ್ಲೈ ಓವರ್ನಲ್ಲಿ 76 ಗಲ್ಡರ್ಗಳನ್ನು ಅಳವಡಿಸಬೇಕಿತ್ತು. ಇದುವರೆಗೆ 34 ಗಲ್ಡರ್ಗಳನ್ನು ಮಾತ್ರ ಅಳವಡಿಸಲಾಗಿದೆ. ಈಗಾಗಲೇ 20 ಗಲ್ಡರ್ಗಳು ತಯಾರುಗೊಂಡಿವೆ. ಅವುಗಳನ್ನು ಅಳವಡಿಸುವುದು ಸೇರಿ ಬಾಕಿ ಎಲ್ಲ ಕಾಮಗಾರಿಗಳನ್ನು ಆಗಸ್ಟ್ 30ರೊಳಗೆ ಪೂರ್ಣಗೊಳಿಸಲೇಬೇಕೆಂಬ ಸೂಚನೆಯನ್ನು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಹಿರಿಯ ಅಧಿಕಾರಿಗಳಾದ ಸತೀಶ ನಾಗನೂರ, ರಮೇಶ ಹವೇಲಿ, ಪ್ರೊಜೆಕ್ಟ್ ಮ್ಯಾನೇಜರ್ ಆರ್.ಆರ್. ಸಿಂಗ್, ಬಿಜೆಪಿಯ ರಾಜು ಕಾಳೆ, ರವಿ ನಾಯಕ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು, ಸ್ಥಳೀಯ ವ್ಯಾಪಾರಸ್ಥರು ಹಾಗೂ ಇತರರು ಹಾಜರಿದ್ದರು.