ರಫ್ತು ಕೇಂದ್ರ ಕಟ್ಟಡ ಶೀಘ್ರ ಪೂರ್ಣಗೊಳಿಸಿ : ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನಿರ್ದೇಶನ

9
Published on

ಮೈಸೂರು: ನಗರದಲ್ಲಿ ನಿರ್ಮಾಣಗೊಳ್ಳ್ಳುತ್ತಿರುವ ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಮೈಸೂರು ಕೈಗಾರಿಕೆಗಳ ಸಂಘದಿಂದ ಸೋಮವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ನಗರಕ್ಕೆ ಆಗಮಿಸಿದ ಅವರನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿಯಾದ ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ಸದಸ್ಯರಾದ ಗೌತಮ್ ಸಾಲೇಚ ಮತ್ತು ರಿತೇಶ್‌ಗೌಡ ಅವರು ಮನವಿ ಸಲ್ಲಿಸಿದರು.

ಮೈಸೂರು ರಫ್ತು ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ ಅದು ತಳಪಾಯ ಹಂತಕ್ಕೆ ಮಾತ್ರ ಸೀಮಿತಗೊಂಡಿದೆ. 2019ರಲ್ಲಿ ಕಾಮಗಾರಿ ಆದೇಶ ಪಡೆದ ಗುತ್ತಿಗೆದಾರರು 2021ರಲ್ಲಿ ಬೇಸ್‌ಮೆಂಟ್ ತನಕ ಮಾತ್ರ ಕಾಮಗಾರಿ ನಡೆಸಿ ಕೆಲಸ ನಿಲ್ಲಿಸಿದರು. ಮೂರು ವರ್ಷಗಳಿಂದ ಕಟ್ಟಡ ಮಳೆಗೆ ಹಾಳಾಗುತ್ತಿದ್ದು ಶಿಥಿಲವಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ 3 ಕೋಟಿ ರೂ., ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ., ಮೈಸೂರು ಕೈಗಾರಿಕೆಗಳ ಸಂಘದ 50 ಲಕ್ಷ ರೂ. ಅನುದಾನ ನೀಡಲು ನಿರ್ಧರಿಸಲಾಗಿದೆ. ಕೆಐಎಡಿಬಿಗೆ ವಿಟಿಪಿಸಿ ಮೂಲಕ ನೀಡಿ 2020ರ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿತ್ತು. ಆದರೆ ಅವಧಿ ಮುಗಿದು 4 ವರ್ಷ ಕಳೆಯುತ್ತಾ ಬಂದರೂ ರಫ್ತು ಕೇಂದ್ರದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.

ಜಿತೋ ಸಂಸ್ಥೆಯಿಂದ ನಗರದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಸ್ಟಾರ್‌ಏರ್ ಲೈನ್ಸ್ ಮಾಲೀಕ ಸಂಜಯ್ ಗೋದಾವತ್ ಅವರು ಮೈಸೂರಿನಲ್ಲಿ ತಮ್ಮ ವಿಮಾನ ಸೇವೆ ಆರಂಭಿಸಲು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಪೂರ್ಣಗೊಳ್ಳಬೇಕು ಎಂದು ತಿಳಿಸಿದ್ದಾರೆ. ಹಾಗಾಗಿ ಈ ಬಗ್ಗೆಯೂ ಕ್ರಮ ಜರುಗಿಸಬೇಕು ಎಂದು ಹೇಳಿರುವ ವಿಷಯವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಯಿತು.

ಮನವಿ ಸ್ವೀಕರಿಸಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು, ಮೊಬೈಲ್ ಮೂಲಕ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಮಹೇಶ್ ಅವರನ್ನು ಸಂಪರ್ಕಿಸಿ ರಫ್ತು ಕೇಂದ್ರದ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net