ಸರದಿ ಸಾಲಿನ ಸಂಕೀರ್ಣ ಕಾಮಗಾರಿ ಪೂರ್ಣಗೊಳಿಸಿ

10 HANUR 3
ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಗತಿಯಲ್ಲಿರುವ ಸರದಿ ಸಾಲಿನ ಸಂಕೀರ್ಣ ಕಾಮಗಾರಿಯನ್ನು ಶಾಸಕ ಎಂ.ಆರ್. ಮಂಜುನಾಥ್ ಪರಿಶೀಲಿಸಿದರು. ಚಂದ್ರಶೇಖರ್, ಚಿನ್ನಣ್ಣ, ವಿಜಯಕುಮಾರ್, ಮಂಜೇಶ್ ಇತರರು ಇದ್ದರು.
Published on

ಹನೂರು: ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಭಕ್ತರು ದೇವರ ದರ್ಶನ ಪಡೆಯಲು ತಿರುಪತಿ ಮಾದರಿಯಲ್ಲಿ ನಿರ್ಮಿಸುತ್ತಿರುವ ಸರದಿ ಸಾಲಿನ ಸಂಕೀರ್ಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಗತಿಯಲ್ಲಿರುವ ಸರದಿ ಸಾಲಿನ ಸಂಕೀರ್ಣ ಕಾಮಗಾರಿ ಸ್ಥಳಕ್ಕೆ ಭಾನುವಾರ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಭಕ್ತರು ದೇವರ ದರ್ಶನ ಪಡೆಯಲು ಗಂಟೆಗಟ್ಟಲೇ ಕಾದು ನಿಲ್ಲುವಂತಾಗಿದ್ದು, ತುಂಬ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ಹಿನ್ನೆಲೆ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಸುಗಮವಾಗಿ ತೆರಳಿ ದೇವರ ದರ್ಶನವನ್ನು ಪಡೆಯುವ ಉದ್ದೇಶದಿಂದ ಅಗತ್ಯ ಮೂಲ ಸೌಕರ್ಯ ಒಳಗೊಂಡಂತೆ ಸುರಂಗ ಮಾರ್ಗದ ಮೂಲಕ ಸಂಕೀರ್ಣವನ್ನು ನಿರ್ಮಿಸುತ್ತಿರುವುದು ಭಕ್ತರಿಗೆ ಅನುಕೂಲವಾಗಲಿದೆ. ಆದ್ದರಿಂದ ಜವಾಬ್ದಾರಿ ಹೊತ್ತವರು ಈ ಬಗ್ಗೆ ಹೆಚ್ಚಿನ ಮುತುರ್ವಜಿ ವಹಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದರ ಮೂಲಕ ಭಕ್ತರ ಸೇವೆಗೆ ಸಮರ್ಪಿಸಬೇಕು ಎಂದು ತಿಳಿಸಿದರು.

ಬಳಿಕ ಭಕ್ತರು ಪುಣ್ಯಸ್ನಾನ ಮಾಡುವ ಅಂತರಗಂಗೆಗೆ ತೆರಳಿದ ಶಾಸಕರು ಪರಿಶೀಲನೆ ನಡೆಸಿ ಕಾಲಕಾಲಕ್ಕೆ ಸ್ವಚ್ಛಗೊಳಿಸುವುದರ ಮೂಲಕ ಶುಚಿತ್ವ ಕಾಪಾಡುವಂತೆ ಹಾಗೂ ಕೊಳಚೆ ನೀರು ಅಂತರಗಂಗೆಗೆ ಸೇರದಂತೆ ಹೊರ ಹೋಗಲು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚಿಸಿದರು. ಇನ್ನು ಕೀರನಹೊಲ ಗ್ರಾಮಕ್ಕೆ ಭೇಟಿ ನೀಡಿ ಸಿಸಿ ರಸ್ತೆ ನಿರ್ಮಿಸುವ ಸಂಬಂಧ ಪರಿಶೀಲನೆ ನಡೆಸಿದರು. ಹಾಗೆಯೇ ತಾಳುಬೆಟ್ಟದ ಬಳಿ 1 ಕೋಟಿ ರೂ.ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಾಧಿಕಾರದ ಉಪ ಕಾರ್ಯದರ್ಶಿ ಜಿ.ಎಲ್.ಚಂದ್ರಶೇಖರ್, ಪಿಡಬ್ಲ್ಯುಡಿ ಎಇಇ ಚಿನ್ನಣ್ಣ, ಎಇ ಮಹೇಶ್, ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ, ಮುಖಂಡರಾದ ಮಂಜೇಶ್, ವಿಜಯಕುಮಾರ್, ಡಿ.ಕೆ ರಾಜು, ನಾಗಣ್ಣ, ಮಹದೇವ, ನವೀನ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net