ನಾಲಾ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ

BEDTI NALA KLG
Published on

ಕಲಘಟಗಿ: ಬೇಡ್ತಿ ನಾಲಾ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಿ, ಕೆರೆಗಳಿಗೆ ನೀರು ತುಂಬಿಸಿ ಎಂದು ಸಚಿವ ಸಂತೋಷ ಲಾಡ್ ಗುತ್ತಿಗೆ ಪಡೆದ ಅಮೃತ್ ಕನ್ಸಸ್ಟ್ರಕ್ಷನ್ ಕಂಪನಿಯವರಿಗೆ ಹಾಗೂ ಇಂಜಿನಿಯರ್​ಗಳಿಗೆ ಸೂಚಿಸಿದರು.

ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ತಮ್ಮ ಅಮೃತ ನಿವಾಸದಲ್ಲಿ ಮಂಗಳವಾರ ಬೇಡ್ತಿ ನಾಲಾ ಕುರಿತು ರೈತರ ಜೊತೆ ಸಂವಾದ ಕಾರ್ಯಕ್ರಮ ನಡೆಸಿ ಅವರು ಮಾತನಾಡಿದರು. ಮೊದಲನೇ ಹಂತದಲ್ಲಿ 35 ಕೆರೆ ಎರಡನೇ ಹಂತದಲ್ಲಿ 100 ಕೆರೆ ತುಂಬಿಸುವುದಾಗಿದೆ ಯೋಜನೆಯಿಂದ 15ರಿಂದ 20 ಸಾವಿರ ಹೆಕ್ಟೇರ್​ನಷ್ಟು ರೈತರ ಜಮೀನಿಗೆ ನೀರು ಒದಗಿಸುತ್ತದೆ. ಅಮೃತ್ ಕನ್ಸಸ್ಟ್ರಕ್ಷನ್ ಕಂಪನಿವರು ಮಾತನಾಡಿ ಈಗಾಗಲೇ 35 ಕೆರೆಗಳಿಗೆ ಪೈಪ್​ಲೈನ್ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಡಿಸೆಂಬರ್ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ನಂತರ ಸಚಿವ ಲಾಡ್ ಎರಡನೇ ಹಂತದಲ್ಲಿ 100 ಕೆರೆ ತುಂಬಿಸಲು ಯೋಜನಾ ವರದಿ ಕುರಿತು ಸರ್ವೆ ಕಾರ್ಯ ಕೈಗೊಂಡು ಇದಕ್ಕೆ ಪ್ರತ್ಯೇಕ ಡಿಪಿಆರ್ ತಯಾರಿಸಿ ಕೊಡಿ ನಾನು ಸರ್ಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭಿಸಲು ಅನುಕೂಲವಾಗುತ್ತದೆ ಎಂದರು.

ನಂತರ ಹಲವು ಸಾರ್ವಜನಿಕರ ಕುಂದುಕೊರತೆ ಅರ್ಜಿ ಸ್ವೀಕರಿಸಿ ಈಡೇರಿಸುವ ಭರವಸೆ ನೀಡಿದರು. ಕೆಲವೊಂದು ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿದರು.

ನಂತರ ತಾಲೂಕಿನ ಬೆಲವಂತರ ಗ್ರಾಮದ ಹತ್ತಿರ ಬೇಡ್ತಿ ನಾಲಾ ನಡೆಯುವ ಕಾಮಗಾರಿ ಸ್ಥಳಕ್ಕೆ ರೈತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಾಮಗಾರಿಯಿಂದ ರೈತರಿಗೆ ಅಷ್ಟೇ ಅಲ್ಲದೆ, ಈ ನೀರು ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ಮುಂದಿನ ದಿನಗಳಲ್ಲಿ ಉಪಯೋಗವಾಗುತ್ತದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ತಮ್ಮ ದಿನನಿತ್ಯದ ಕೆಲಸದ ಮಾಹಿತಿ ನನಗೆ ಸಲ್ಲಿಸಿ ಕೆಲಸ ಬೇಗನೆ ಮುಗಿಸಲು ಪ್ರಯತ್ನಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಮೃತ್ ಕನ್ಸಸ್ಟ್ರಕ್ಷನ್ ಕಂಪನಿಯ ಡೈರೆಕ್ಟರ್ ಶ್ರೀನಿವಾಸ ಎಂ., ಕಂಪನಿ ಜೆ.ಎಂ ರಾಧಾಕೃಷ್ಣ ರೆಡ್ಡಿ, ಪ್ರಾಜೆಕ್ಟ್ ಮ್ಯಾನೇಜರ್ ಬಸವರಾಜ ಇಟಗಿ, ಇಂಜಿನಿಯರ್ ಸುರೇಶ ಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಎಸ್. ಆರ್. ಪಾಟೀಲ, ಬಿ.ವೈ. ಪಾಟೀಲ,ನರೇಶ ಮಲೆನಾಡು, ಲಾಡ್ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಗಂಗಾಧರ ಚಿಕ್ಕಮಠ, ಕಲ್ಲಯ್ಯ ಹಿರೇಮಠ,ರೈತ ಮುಖಂಡರಾದ ಉಳವಪ್ಪ ಬಳಿಗೇರಿ, ಡಾಕಪ್ಪ ಲಮಾಣಿ, ಅಜ್ಜಪ್ಪ ಕುರಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net