20 ದಿನಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ

6 ckm 1
ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಪರಿಶೀಲನೆ ನಡೆಸಿದರು. ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ಮೆಡಿಕಲ್ ಕಾಲೇಜು ಡೀನ್ ಎಂ.ಆರ್.ಹರೀಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಡಿಕಲ್ ಕಾಲೇಜು ಕಟ್ಟಡವನ್ನು ಇನ್ನೂ 20 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ನಗರದ ಹೊರವಲಯದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳ ಅಹವಾಲು ಆಲಿಸಿ ಮಾತನಾಡಿದ ಅವರು, ಆಗಸ್ಟ್ ಒಂದರಂದು ಶಾಸಕರು ಮೆಡಿಕಲ್ ಕಾಲೇಜಿಗೆ ಬಂದು ಪರಿಶೀಲನೆ ನಡೆಸುತ್ತಾರೆ ಅಷ್ಟರ ಒಳಗಾಗಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿರಬೇಕು ಎಂದು ತಿಳಿಸಿದರು.
ಈ ವೇಳೆ ಸಚಿವರ ಎದುರು ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕ್ಯಾಂಪಸ್ ನಲ್ಲಿನ ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು.
ಮೆಡಿಕಲ್ ವಿದ್ಯಾರ್ಥಿನಿ ನಮಿತಾ ಭಟ್ ಮಾತನಾಡಿ, ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಟೀಚರ್ಸ್ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದೇವೆ. ಆದರೆ ಅಲ್ಲಿಯೂ ನೀರಿನ ಸಮಸ್ಯೆ ಇದೆ. ಕಾಲೇಜಿನ ಮ್ಯಾನೇಜ್ಮೆಂಟ್ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದಾರೆ. ಇದರ ಬದಲಾಗಿ ಶಾಶ್ವತವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಸಿದ ಸಚಿವರು ಇನ್ನೊಂದು ತಿಂಗಳ ಒಳಗಾಗಿ ವಿದ್ಯಾರ್ಥಿನಿಲಯ ಸಿದ್ಧಗೊಳ್ಳಬೇಕು ಎಂದು ಹೇಳಿದ್ದಲ್ಲದೆ, ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇದುವರೆಗೆ ಏಕೆ ಆಗಿಲ್ಲ ಎಂದು ಸಂಬಂಧಿಸಿದ ಗುತ್ತಿಗೆದಾರರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗುತ್ತಿಗೆದಾರರು ಈಗಾಗಲೇ ಪೈಪ್ ಲೈನ್ ಕಾಮಗಾರಿ ಮುಕ್ತಾಯಗೊಂಡಿದೆ. ಸೋಲಾರ್ ಪ್ಯಾನೆಲ್ ಅಳವಡಿಕೆ ಕಾರ್ಯ ಬಾಕಿ ಇದೆ. ಇನ್ನೊಂದು ತಿಂಗಳ ಒಳಗಾಗಿ ಬಿಸಿನೀರಿನ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಸುಮಿತ್ ಮಾತನಾಡಿ, ನರ್ಸಿಂಗ್ ಕಾಲೇಜನ್ನು ಪ್ರತ್ಯೇಕವಾಗಿ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇನ್ನು ನರ್ಸಿಂಗ್ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ ಹೌಸಿಂಗ್ ಬೋರ್ಡ್ ನಲ್ಲಿದ್ದು ಪ್ರತಿದಿನ ವಿದ್ಯಾರ್ಥಿಗಳು 20 ಕಿಲೋಮೀಟರ್ ಓಡಾಡಬೇಕಾದ ಅನಿವಾರ್ಯತೆ ಇದೆ ಎಂದು ಸಮಸ್ಯೆ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸುತ್ತೇವೆ. ಮೆಡಿಕಲ್ ಕಾಲೇಜು ಕಟ್ಟಡದಲ್ಲಿ ಎಲ್ಲಾ ವ್ಯವಸ್ಥೆಗಳು ಇರುವ ಕಾರಣದಿಂದಾಗಿ ಪ್ರತ್ಯೇಕ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡುವ ಯಾವುದೇ ಯೋಚನೆ ಇಲ್ಲ ಎಂದು ಹೇಳಿದರು.
ಎಂಬಿಬಿಎಸ್ ವಿದ್ಯಾರ್ಥಿನಿ ಗೌರಿ ಮಾತನಾಡಿ, ಮೆಡಿಕಲ್ ಕಾಲೇಜು ನಗರದಿಂದ ದೂರದಲ್ಲಿದ್ದು ವಿದ್ಯಾರ್ಥಿಗಳಿಗೆ ಯಾವುದೇ ಅಗತ್ಯ ವಸ್ತುಗಳು ಬೇಕೆಂದರೂ ನಗರಕ್ಕೆ ಹೋಗಬೇಕಿದೆ. ಹೀಗಾಗಿ ಕ್ಯಾಂಪಸ್ ಆವರಣದಲ್ಲಿಯೇ ಶಾಪಿಂಗ್ ಕಾಂಪ್ಲೆಕ್ಸ್ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಶಾಪಿಂಗ್ ಕಾಂಪ್ಲೆಕ್ಸ್ ಆರಂಭಕ್ಕೆ ಟೆಂಡರ್ ಕರೆಯುವುದಾಗಿ ತಿಳಿಸಿದರು.
ಮೆಡಿಕಲ್ ಕಾಲೇಜಿನಲ್ಲಿನ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶರಣಪ್ರಕಾಶ್ ಪಾಟೀಲ್, ಶೀಘ್ರವೇ ನೀರಿನ ಸಮಸ್ಯೆ ಪರಿಹಾರ ಮಾಡುವಂತೆ ಸೂಚಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಮೆಡಿಕಲ್ ಕಾಲೇಜು ಡೀನ್ ಎಂ.ಆರ್.ಹರೀಶ್, ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರತಿದಿನ ಒಂದುವರೆ ಲಕ್ಷ ಲೀಟರ್ ನೀರು ಬೇಕಾಗಬಹುದು ಈ ಹಿನ್ನೆಲೆಯಲ್ಲಿ ಮೂರು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಟ್ಯಾಂಕ್ ನಿರ್ಮಾಣವಾದ ಬಳಿಕ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಚ್ ಡಿ ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಪ್ರಮುಖರಾದ ಬಿ.ಎಚ್.ಹರೀಶ್, ಶಿವಾನಂದ ಸ್ವಾಮಿ, ಡಾ.ಅಂಶುಮಂತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net