

ಬಾಗಲಕೋಟೆ: ಬಾಗಲಕೋಟೆಯ ನಗರಾಸ್ತಿಗಳ ಅಳತೆ ಕಾರ್ಯವನ್ನು ಈಗಾಗಲೇ ದ್ರೋನ್ ಬಳಸಿ ಕೈಗೊಳ್ಳಲಾಗಿದೆ. ಮುಂದಿನ ಹಂತದ ಕಾರ್ಯವನ್ನು ಕೈಗೊಂಡು ಸಾರ್ವಜನಿಕರಿಗೆ ಅಂತಿಮ ಆಸ್ತಿ ಹಕ್ಕು ದಾಖಲೆಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕಿ ನಜ್ಮಾ ಪೀರಜಾದೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಯುಪಿಒಆರ್ ಕಚೇರಿಯಲ್ಲಿ ಬುಧವಾರ ನಡೆದ ವಿಚಾರಣಾಧಿಕಾರಿಗಳು, ತಪಾಸಕರು ಹಾಗೂ ಭೂಮಾಪಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಗಲಕೋಟೆಯ ನಗರಾಸ್ತಿಗಳ ಡಿಪಿಆರ್ (ಕರಡು ನಗರಾಸ್ತಿ ಪ್ರತಿ) ತಯಾರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಅಂದಾಜು 10,920 ಖಾಲಿ ನಿವೇಶನಗಳು ಇರುವುದರಿಂದ ಹಕ್ಕುದಾರರು, ಮಾಲೀಕರ ಕಾಯಂ ವಿಳಾಸ ಲಭ್ಯವಿರದ ಕಾರಣ ಕರಡು ನಗರಾಸ್ತಿ ಪ್ರತಿಗಳನ್ನು ವಿತರಿಸಿಲ್ಲ. ಖಾಲಿ ನಿವೇಶನ, ಬಾಗಿಲು ಮುಚ್ಚಿದ ಮನೆಗಳ ಮಾಹಿತಿ ಕಲೆ ಹಾಕಲು ತಿಳಿಸಿದರು.
ಭೂದಾಖಲೆಗಳ ಉಪನಿರ್ದೇಶಕ ರವಿಕುಮಾರ ಎಂ. ಮಾತನಾಡಿ, ಕರಡು ನಗರಾಸ್ತಿ ಪ್ರತಿಗಳನ್ನು ವಿತರಿಸುವ ನಿಟ್ಟಿನಲ್ಲಿ ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಿದ್ದರೂ ಸದರಿ ಖಾಲಿ ನಿವೇಶನಗಳ ಹಕ್ಕುದಾರರು ಡಿಪಿಆರ್ ತೆಗೆದುಕೊಂಡು ಹೋಗಿಲ್ಲ ಎಂದರು. ಸದರಿ ಡಿಪಿಆರ್‌ಗಳನ್ನು ಯುಪಿಒಆರ್ ಕಚೇರಿ ಬಾಗಲಕೋಟೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಹೊಸ ಜಿಲ್ಲಾ ಪಂಚಾಯಿತಿ ಸಭಾಂಗಣ ಎದುರಿಗಿರುವ ರೂಮ್ ನಂ.245 ರಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಇಡಲಾಗಿದೆ. ಆಸ್ತಿ ಮಾಲೀಕರು ಕಚೇರಿ ಅವಧಿಯಲ್ಲಿ ಬಂದು ತಮ್ಮ ಆಸ್ತಿಗಳ ಕರಡು ಪತ್ರವನ್ನು ಪಡೆದುಕೊಳ್ಳಬೇಕು. ಏನಾದರೂ ತಕರಾರು ಇದ್ದಲ್ಲಿ ಅವಶ್ಯಕ ದಾಖಲೆಗಳೊಂದಿಗೆ 15 ದಿನಗೊಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ತಿಳಿಸಲಾಗಿದೆ ಎಂದರು.
ಅಲ್ಲದೆ, ವೆಬ್‌ಸೈಟ್ www.rdservices.karnataka.gov.in ನಲ್ಲೂ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸರ್ಕಾರ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ ಎಂದರು. ಸಭೆಯಲ್ಲಿ ಭೂದಾಖಲೆ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಭೂಮಾಪನ ಸಿಬ್ಬಂದಿ ಪಸ್ಥಿತರಿದ್ದರು.