ಜೂನ್‌ಗೆ ಸಿಗಂದೂರು ಸೇತುವೆ ಮುಗಿಸಿ: ಬಿವೈಆರ್

disha
ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ ನಡೆಯಿತು. ಗುರುದತ್ತ ಹೆಗಡೆ, ಎನ್.ಹೇಮಂತ್ ಇದ್ದರು.
Published on

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ಕೈಗೊಳ್ಳಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ದಿಶಾ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಗಂದೂರು ಸೇತುವೆಯನ್ನು ಜೂನ್ ಅಂತ್ಯದೊಳಗೆ ಮುಗಿಸಬೇಕು. ಹೊಳೆಹೊನ್ನೂರು ಬೈಪಾಸ್ ರಸ್ತೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.

ಬಹುಗ್ರಾಮ ಯೋಜನೆ ಸೇರಿ ಕುಡಿಯುವ ನೀರಿನ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಸಮಗ್ರ ಅಧ್ಯಯನ ನಡೆಸಿ ಜೆಜೆಎಂ ಯೋಜನೆ ಮೂಲಕ ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ಕುಡಿಯುವ ನೀರು ಪೂರೈಸಬೇಕು. ಜೆಜೆಎಂ ಯೋಜನೆಯಲ್ಲಿ ಸುಮಾರು 107.75 ಕೋಟಿ ರೂ. ಮೊತ್ತದಲ್ಲಿ ಒಟ್ಟು 2,528 ಕಾಮಗಾರಿಗಳು ಮಂಜೂರಾಗಿವೆ. 2,507 ಕಾಮಗಾರಿ ಪ್ರಾರಂಭಗೊಂಡಿವೆ. 699 ಪ್ರಗತಿಯಲ್ಲಿದ್ದು 1,808 ಪೂರ್ಣಗೊಂಡಿವೆ. ಯಾವುದೇ ಹೊಸ ಕಾಮಗಾರಿ ಕೈಗೊಳ್ಳುವ ಮುನ್ನ ಅಧಿಕಾರಿಗಳು ಪರಿಶೀಲಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳ ಅಭಿಪ್ರಾಯ ಪಡೆದು ಕಾಮಗಾರಿ ನಡೆಸಬೇಕು ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ 1.20 ಲಕ್ಷ ರೂ. ಘಟಕ ವೆಚ್ಚ ನೀಡಲಾಗುತ್ತಿದ್ದು, ಕೆಲ ಫಲಾನುಭವಿಗಳು ಘಟಕ ವೆಚ್ಚ ಸಾಲುತ್ತಿಲ್ಲವೆಂದು ಈ ಹಣವನ್ನು ಹಿಂದಿರುಗಿಸಿದ್ದಾರೆ. ಕೆಲವೆಡೆ ಹಕ್ಕುಪತ್ರ ಇದ್ದವರಿಗೆ ಮಾತ್ರ ಹಣ ನೀಡಲಾಗುತ್ತಿದೆ. ಅನಧಿಕೃತ ಜಾಗಗಳನ್ನು ಸಕ್ರಮಗೊಳಿಸುವ ಹಾಗೂ ಅರ್ಹರಿಗೆ ಈ ಯೋಜನೆಯನ್ನು ತಲುಪಿಸಬೇಕು ಎಂದು ತಿಳಿಸಿದರು.

ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್ ಉಪಸ್ಥಿತರಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net