ಕರಾವಳಿ ಜಿಲ್ಲೆಗಳ ಸಂಪೂರ್ಣ ನಿರ್ಲಕ್ಷ್ಯ: ಯಶ್ಪಾಲ್ ಸುವರ್ಣ

Yashpal suvarna new
Published on

ಉಡುಪಿ: ಸಿದ್ದರಾಮಯ್ಯ ರವರು 14 ನೇ ಬಾರಿಗೆ ಮಂಡಿಸಿರುವ ಈ ಬಜೆಟ್ ಕರಾವಳಿ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ರಾಜ್ಯದ 224 ಕ್ಷೇತ್ರಗಳ ಪೈಕಿ ಸರ್ಕಾರ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಟ್ಟು ಬಜೆಟ್ ಮಂಡಿಸಿದ ಅನುಮಾನ ಕರಾವಳಿ ಭಾಗದ ಜನರಲ್ಲಿ ಮೂಡಿದೆ ಎಂದು ಉಡುಪಿ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ  ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು ವಾಯು, ಜಲ, ಹಾಗೂ ರಸ್ತೆ ಮಾರ್ಗವನ್ನು ಹೊಂದಿರುವ ರಾಜ್ಯದ ಏಕೈಕ ಪ್ರದೇಶ ಕರಾವಳಿ ಜಿಲ್ಲೆಯಾಗಿದ್ದು ಶಿಕ್ಷಣ, ಧಾರ್ಮಿಕ, ಬ್ಯಾಂಕಿಂಗ್, ಆರೋಗ್ಯ, ಸಹಕಾರ ಕ್ಷೇತ್ರಗಳಲ್ಲಿ ರಾಜ್ಯದಲ್ಲಿಯೇ ಮಹತ್ವದ ಸ್ಥಾನ ಹೊಂದಿದ್ದರೂ  ಸರ್ಕಾರ ಮಾತ್ರ ತಾರತಮ್ಯ ಧೋರಣೆ ಅನುಸರಿಸುತ್ತಿದೆ.

 ರಾಜ್ಯದ ಅತೀ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರು ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುವ ಮಲ್ಪೆ ಬಂದರು ಅಭಿವೃದ್ದಿ ಯೋಜನೆ, ಕಡಲ್ಕೊರೆತ ಶಾಶ್ವತ ಪರಿಹಾರ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿರುವ ಹಾಸ್ಟೆಲ್ ಸೌಲಭ್ಯ ಒದಗಿಸುವ ಬಗ್ಗೆ ಈ ಬಜೆಟ್ ಯಾವುದೇ ಅನುದಾನ ಒದಗಿಸಿಲ್ಲ.

 ಬಿಜೆಪಿ ಸರಕಾರ ಬಿಲ್ಲವ, ಈಡಿಗ ಸಮುದಾಯದ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ  ಆರಂಭಿಸಿದ ಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮಕ್ಕೆ ಯಾವುದೇ ಅನುದಾನ ಘೋಷಣೆ ಮಾಡದೇ ಮೂರ್ತೆದಾರಿಕೆ ಕುಲಕಸುಬು ಮಾಡುವ ಬಂಧುಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ನಿರಾಸಕ್ತಿ ಹೊಂದಿದ್ದು, ಬಂಟ ಸಮುದಾಯದ ನಿಗಮ ರಚನೆಗೆ ಸರಕಾರ ಆಸಕ್ತಿ ತೋರಿಲ್ಲ.

ಮುಂದಿನ ದಿನಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಹಾಗೂ ಹೋಳಿ ಹಬ್ಬದ ಆಚರಣೆಗೆ ರಾಜ್ಯ ಸರಕಾರ ರಜೆಯನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ನು ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಮತದಾನದ ಹಕ್ಕು ಹಾಗೂ ಸಹಕಾರ ಕ್ಷೇತ್ರದ ಬಲವರ್ಧನೆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಿಂದಲೂ ವಿಧಾನ ಪರಿಷತ್ತಿಗೆ ಸದಸ್ಯರ ಆಯ್ಕೆಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net