

ಸಾಗರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ತಾಲೂಕಿನ ತಾಳಗುಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ನೀಡಬೇಕು ಎಂಬುದು ಸರ್ಕಾರದ ಪ್ರಮುಖ ಬದ್ಧತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ 28 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು ಹಾಗೂ ಶರಾವತಿ ಹಿನ್ನೀರು ಸಾಗರಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಬರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಬೇಕು ಎನ್ನುವ ಉದ್ದೇಶದಿಂದ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಆದರೆ ಕಾಮಗಾರಿ ವಿಳಂಬವಾಗುತ್ತಿದ್ದು ಅಧಿಕಾರಿಗಳು ತ್ವರಿತವಾಗಿ ಮುಗಿಸುವತ್ತ ಗಮನಹರಿಸಿ ಎಂದರು.
ಕಾಮಗಾರಿಗೆ ಬೇಕಾದ ವಿದ್ಯುತ್ ಪೂರೈಕೆ ಮಾಡಲು ಮೆಸ್ಕಾಂಗೆ 27 ಲಕ್ಷ ರೂ. ಪಾವತಿ ಮಾಡಬೇಕಾಗಿದ್ದು ತಕ್ಷಣ ಹಣ ಬಿಡುಗಡೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಕಾಮಗಾರಿ ಬಹುತೇಕ ಮುಗಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಸ್ಥಳೀಯ ಶಾಸಕರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ಗುರುಕೃಷ್ಣ ಶೆಣೈ, ತಾಳಗುಪ್ಪ ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು, ಪ್ರಮುಖರಾದ ಮಾರುತಿ ಶಿರವಂತೆ, ಮನೋಜ್ ಜನ್ನೆಹಕ್ಲು, ಕನ್ನಪ್ಪ, ರಾಘವೇಂದ್ರ ಕುಮಾರ್, ಶಿವನಗೌಡ ಇತರರಿದ್ದರು.