ಬಹುಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಳಿಸಿ

BLY- 4-2
ಬಳ್ಳಾರಿ ನಗರದ ಜಿಪಂ ನಜೀರ್‌ಸಾಬ್ ಸಭಾಂಗಣ ಸೋಮವಾರ ನಡೆದ ಜಿಲ್ಲಾಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಸಂಸದ ವೈ.ದೇವೇಂದ್ರಪ್ಪ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೊಪ್ಪಳ ಸಂಸದ ಸಂಗಣ್ಣ ಕರಡಿ, ಎಂಎಲ್‌ಸಿ ವೈ.ಎಂ.ಸತೀಶ್, ಪಾಲಿಕೆ ಮೇಯರ್ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇ ರಾಹುಲ್ ಶರಣಪ್ಪ ಸಂಕನೂರ ಇದ್ದಾರೆ.
Published on

ಬಳ್ಳಾರಿ : ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ನೀರು ಒದಗಿಸಬೇಕು ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.

ನಗರದ ಜಿಪಂ ನಜೀರ್‌ಸಾಬ್ ಸಭಾಂಗಣ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ (ದಿಶಾ) ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಗ್ರಾಮಗಳಿಗೆ ಭೇಟಿಗೆ ಹೋದರೆ ಬಾಯಿಗೆ ಬಂದಂತೆ ಜನರು ಬೈಯುತ್ತಾರೆ. ಅವರಿಗೆ ಉತ್ತರ ಕೊಡುವುದು ಕಷ್ಟವಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡರೆ ಸಾಲದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವಂತಹ ಕೆಲಸ ಮಾಡಬೇಕು ಎಂದು ತಾಕೀತು ನೀಡಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ವಿನೋದ್‌ಕುಮಾರ್ ಗುಪ್ತ ಮಾತನಾಡಿ, ಒಟ್ಟು 83 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ಅದರಲ್ಲಿ 67 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನು 61 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ನಾಲ್ಕು ಕಾಮಗಾರಿಗಳು ಪೂರ್ಣಗೊಂಡರೂ ಕೆರೆ ಸೋರಿಕೆಯಿಂದಾಗಿ ನಿಷ್ಕ್ರೀಯಗೊಂಡಿವೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಸರ್ಕಾರದ ಹಣ ಕೆರೆ ಸೋರಿಕೆ ಹೆಸರಿನಲ್ಲಿ ಪೋಲಾಗುತ್ತಿದೆ. ಕಾಮಗಾರಿ ಮಾಡದಿದ್ದರೆ ಸರ್ಕಾರದ ಹಣವನ್ನು ಏಕೆ ದುರುಪಯೋಗ ಪಡೆಸಿಕೊಳ್ಳುತ್ತಿರಾ ? ಕೆರೆ ಸೋರಿಕೆಯಿಂದ ಕೋಟ್ಯಂತರ ರೂ. ಹಣವನ್ನು ವ್ಯಯಸಿಸಲಾಗಿದೆ. ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿ, ಆಗಿರುವ ಲೋಪವನ್ನು ಸರಿಪಡಿಸಲು ಸಮಿತಿ ರಚನೆ ಮಾಡಬೇಕು. ಸಮಿತಿಯ ವರದಿ ಆಧಾರದ ಮೇಲೆ ಮುಂದೆ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅವರಿಗೆ ತಿಳಿಸಿದರು.

ಇನ್ನು ಎಂಎಲ್‌ಸಿ ವೈ.ಎಂ. ಸತೀಶ್ ಇದೇ ವಿಷಯವನ್ನು ಪ್ರಸ್ತಾಪಿಸಿ, ಮಿಂಚೇರಿ ಕೆರೆಯಿಂದ ಗ್ರಾಮೀಣ ಭಾಗದಲ್ಲಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಜನರು ನನ್ನ ಬಳಿ ಬಂದು ಪ್ರತಿದಿನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಸಂಜೀವರಾಯನ ಕೋಟೆಗೆ ನೀರು ಪೂರೈಕೆ ಆಗುತ್ತಿಲ್ಲವಂತೆ, ಅಧಿಕಾರಿಗಳು ಏನೂ ಕೆಲಸ ಮಾಡುತ್ತಿದ್ದೀರಿ ? ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ರಚನೆಗೆ ಸೂಚನೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ನಿಷ್ಕ್ರೀಯಗೊಂಡಿರುವ ವಿಚಾರದ ಬಗ್ಗೆ ಅಸಮಾಧಾನಗೊಂಡ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕಂಪ್ಲಿ ತಾಲೂಕಿನ ಹಂಪದೇವನಹಳ್ಳಿ,ಜೌಕು ಸೇರಿ ಐದು ಗ್ರಾಮ, ಬಳ್ಳಾರಿ ತಾಲೂಕಿನ ಚೆಳಗುರ್ಕಿ ಮಾಹೂ ವೈ.ಬೂದಿಹಾಳ್ ಸೇರಿದಂತೆ 9 ಗ್ರಾಮಗಳಲ್ಲಿ ಒಟ್ಟು 11.32 ಕೋಟಿ ರೂ. ವೆಚ್ಚದ ಕಾಮಗಾರಿಗಳು 2009-10ನೇ ಸಾಲಿನಲ್ಲಿ ಪೂರ್ಣಗೊಂಡಿವೆ. ಆದರೆ ಕೆರೆ ಸೋರಿಕೆ ಆಗುತ್ತಿದೆ ಎನ್ನುವ ನೆಪ ಹೇಳಿಕೊಂಡು ಕಾಮಗಾರಿಯನ್ನು ನಿಷ್ಕ್ರೀಯಗೊಳ್ಳಿಸಿರುವುದು ಸರಿಯಲ್ಲ. ಈ ಬಗ್ಗೆ ತುರ್ತಾಗಿ ಸಮಿತಿ ರಚನೆ ಮಾಡಬೇಕು. ಆ ಮೂಲಕ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒಗೆ ತಿಳಿಸಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಬೇಕು ಎಂದರು.

  • 74 ಆರ್‌ಒ ಘಟಕಗಳು ಸ್ಥಗಿತ
    ಜಿಲ್ಲೆಯಲ್ಲಿ ಒಟ್ಟು 504 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ 430 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 74 ಘಟಕಗಳು ದುರಸ್ತಿಗೊಳ್ಳಬೇಕಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದ ದೇವೇಂದ್ರಪ್ಪ, ಶುದ್ಧ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು. ಪರಿಸ್ಥಿತಿ ಕೈ ಮೀರುವ ಮುಂಚೆ ಎಲ್ಲ ಘಟಕಗಳನ್ನು ದುರಸ್ತಿಗೊಳಿಸಬೇಕು. ಯಾರೂ ಕೂಡ ಕಲುಷಿತ ನೀರು ಕುಡಿಯಬಾರದು. ಅದಕ್ಕಾಗಿ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದರು.
  • ಜೆಜೆಎಂ ಕಾಮಗಾರಿ ಗುಣಮಟ್ಟ ಇರಲಿ
    ಜಲಜೀವನ ಮಿಷನ್ ಯೋಜನೆಯಡಿ (ಜೆಜೆಎಂ) ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ದೊರಕಿಸಿಕೊಡಬೇಕು. ಅದಕ್ಕಾಗಿ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಲು ಪ್ರತಿ ಮನೆಗೆ ಸರ್ಕಾರ 25 ಸಾವಿರ ರೂ. ವ್ಯಯಿಸುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಹಾಗಾಗಿ ಅಧಿಕಾರಿಗಳು ಕೇವಲ ಸ್ಥಳೀಯ ಜನಪ್ರತಿನಿಧಿಗಳನ್ನಷ್ಟೇ ಕರೆದು ಕಾರ್ಯಕ್ರಮ ಮಾಡಿ ಚಾಲನೆ ನೀಡದರೆ ಸಾಲದು, ಸಂಸದರಿಗೂ ಆಹ್ವಾನಿಸಬೇಕು. ಜೆಜೆಎಂ ಕಾಮಗಾರಿಯಲ್ಲಿ ಯಾವುದೇ ರೀತಿಯಲ್ಲಿ ಕಳಪೆ ಆಗದಂತೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸಂಗಣ್ಣ ಕರಡಿ ಅಧಿಕಾರಿಗಳಿಗೆ ತಿಳಿಸಿದರು. ಪಾಲಿಕೆ ಮೇಯರ್ ಡಿ.ತ್ರಿವೇಣಿ, ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿಪಂ ಸಿಇ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net