ವಾರದಲ್ಲಿ 3 ದಿನ ಸಂಪೂರ್ಣ ಲಾಕ್​ಡೌನ್

17 AKR 01
Published on

ಅಕ್ಕಿಆಲೂರ: ಕರೊನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ವಾರದಲ್ಲಿ ಮೂರು ದಿನ (ಶುಕ್ರ, ಶನಿ, ಭಾನು) ಸಂಪೂರ್ಣ ಲಾಕ್​ಡೌನ್ ಮಾಡಲು ತೀರ್ವನಿಸಿದ್ದಾರೆ.

ತಹಸೀಲ್ದಾರ್ ಎರ್ರಿಸ್ವಾಮಿ, ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ, ತಾಪಂ ಇಒ ಸುನೀಲಕುಮಾರ, ಅಕ್ಕಿಆಲೂರ ಗ್ರಾಪಂ ಪಿಡಿಒ ಪ್ರವೀಣಕುಮಾರ ನೇತೃತ್ವದಲ್ಲಿ ಸ್ಥಳೀಯ ಗ್ರಾಪಂನಲ್ಲಿ ಸೋಮವಾರ ಏರ್ಪಡಿಸಿದ್ದ ಹಿರಿಯರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಅಕ್ಕಿಆಲೂರ ಹೋಬಳಿ ವ್ಯಾಪ್ತಿಯ 52 ಗ್ರಾಮಗಳ ಜನರು ಅಗತ್ಯ ವಸ್ತುಗಳಿಗಾಗಿ ಪಟ್ಟಣಕ್ಕೆ ನಿತ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರ, ಮದ್ಯದಂಗಡಿ, ಕಿರಾಣಿ, ಹಾರ್ಡ್​ವೇರ್, ಹೋಟೆಲ್​ಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಇದರಿಂದ ಕರೊನಾ ಪ್ರಕರಣಗಳು ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಹೀಗಾಗಿ, ಸಾರ್ವಜನಿಕರೇ ಸ್ವಯಂ ಲಾಕ್​ಡೌನ್ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

‘ಶುಕ್ರವಾರ, ಶನಿವಾರ, ಭಾನುವಾರ ಸಂಪೂರ್ಣ ಲಾಕ್​ಡೌನ್​ಗೆ ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಔಷಧ, ಆಸ್ಪತ್ರೆ ಬಿಟ್ಟರೆ ಮದ್ಯದಂಗಡಿ ಸಹಿತ ಬಂದ್ ಇರಲಿವೆ. ಉಳಿದ ದಿವಸ ಎಂದಿನಂತೆ ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಸಬಹುದು’ ಎಂದು ಗ್ರಾಮದ ಹಿರಿಯ ಮುಖಂಡ ಡಾ. ಪ್ರಕಾಶಗೌಡ ಪಾಟೀಲ ತಿಳಿಸಿದರು.

ತಹಸೀಲ್ದಾರ್ ಎರಿಸ್ವಾಮಿ ಮಾತನಾಡಿ, ಅಕ್ಕಿಆಲೂರಿನ ಜನತೆ ಕೈಗೊಂಡಿರುವ ನಿರ್ಧಾರ ಶ್ಲಾಘನೀಯ. ಇದು ಎಲ್ಲ ಗ್ರಾಮಗಳಿಗೂ ಆದರ್ಶವಾಗಿದೆ. ವಾರದ ಮೂರು ದಿನ ಸಂಪೂರ್ಣ ಲಾಕ್​ಡೌನ್​ಗೆ ಹಾನಗಲ್ಲ ತಾಲೂಕಾಡಳಿತ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಪಾರ್ವತಿ ಮಾದರ, ಉಪಾಧ್ಯಕ್ಷೆ ಸೀರಾಜ ಬಾಳೂರ, ಗ್ರಾಪಂ ಎಲ್ಲ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net