ಸೋಂಕು ತೀವ್ರವಾದರೆ ಸಂಪೂರ್ಣ ಲಾಕ್​ಡೌನ್

17 c.c. patil video confernace
Published on

ಗದಗ: ಕರೊನಾ ಸೋಂಕು ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡರೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಪಾಸಿಟಿವಿಟಿ ರೇಟ್ ಹೀಗೆ ಮುಂದುವರಿದರೆ ವಾರದೊಳಗೆ ಸಂಪೂರ್ಣ ಲಾಕ್​ಡೌನ್ ಕುರಿತು ನಿರ್ಧರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ರ್ಚಚಿಸಿ ಸಂಪೂರ್ಣ ಲಾಕ್​ಡೌನ್ ಘೊಷಣೆ ಮಾಡಲಾಗುವುದು ಎಂದರು.
ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲೆಗೆ 115 ಆಕ್ಸಿಜನ್ ಕಾನ್ಸನ್​ಟ್ರೇಟರ್ ಲಭ್ಯವಾಗಲಿವೆ ಎಂದು ಹೇಳಿದರು.
ಸರ್ಕಾರದಿಂದ ಗದಗ ಜಿಲ್ಲೆಗೆ 50 ಆಕ್ಸಿಜನ್ ಕಾನ್ಸನ್​ಟ್ರೇಟರ್ ಹಂಚಿಕೆಯಾಗಿದ್ದು ಮಂಗಳವಾರ ಜಿಲ್ಲೆಗೆ ಆಗಮಿಸಲಿವೆ. ಅದರೊಂದಿಗೆ ನನ್ನ ವೈಯಕ್ತಿಕ ಪ್ರಯತ್ನದಿಂದ 65 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳು ಇನ್ನೆರಡು ದಿನಗಳಲ್ಲಿ ಜಿಲ್ಲೆಯ ಸೋಂಕಿತರ ಚಿಕಿತ್ಸೆಗೆ ದೊರೆಯಲಿವೆ ಎಂದರು.
ಆಕ್ಸಿಜನ್ ಸಂಗ್ರಹಿಸುವ 160 ಸಿಲಿಂಡರ್​ಗಳನ್ನು ಕೈಗಾರಿಕಾ ವಸಾಹತುಗಳಿಂದ ಪಡೆಯಲಾಗಿದೆ. ಅಲ್ಲದೆ, 100 ಸಿಲಿಂಡರ್​ಗಳನ್ನು ಪ್ರಾಯೋಜಕರಿಂದ ಪಡೆಯಲಾಗಿದೆ ಎಂದರು.
ಸೋಮವಾರ ಜಿಲ್ಲೆಯಲ್ಲಿ ಎರಡು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಸರ್ಕಾರದ ನಿಯಮಾನುಸಾರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದರು.
ಗದಗ ಜಿಮ್್ಸ ಆಸ್ಪತ್ರೆಗೆ ಹೊಸದಾಗಿ ನೀಡಲಾದ 50 ವೆಂಟಿಲೇಟರ್​ಗಳ ಪೈಕಿ 33 ವೆಂಟಿಲೇಟರ್​ಗಳನ್ನು ಅಳವಡಿಸಿ ಕಾರ್ಯಾರಂಭ ಮಾಡಲಾಗಿದೆ. ಇನ್ನುಳಿದ ವೆಂಟಿಲೇಟರ್​ಗಳನ್ನು ಅಳವಡಿಸುವ ಮೂಲಕ ಸೋಂಕಿತರ ಪ್ರಾಣ ಹಾನಿ ತಪ್ಪಿಸಲಾಗುವುದು ಎಂದರು.
ಸೋಂಕು ನಿಯಂತ್ರಣಕ್ಕಾಗಿ ಹಾಗೂ ಸೋಂಕಿತರ ಜೀವ ಹಾನಿ ತಪ್ಪಿಸಲು ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಜಿಲ್ಲೆಯ ಜನರು ವಿನಾಕಾರಣ ಮನೆಯಿಂದ ಹೊರಬರದೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದರು.
ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿ.ಪಂ. ಸಿಇಒ ಭರತ್ ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.
ಎಚ್.ಕೆ. ಪಾಟೀಲರಿಂದ ಸಣ್ಣತನ ಪ್ರದರ್ಶನ
ಶಾಸಕ ಎಚ್.ಕೆ. ಪಾಟೀಲ ಅವರು ಪಿಎಂ ಕೇರ್ಸ್​ನಿಂದ ಬಂದಿರುವ ವೆಂಟಿಲೇಟರ್​ಗಳ ಕುರಿತು ಹಗುರವಾಗಿ ಮಾತನಾಡಿ ಸಣ್ಣತನ ಪ್ರದರ್ಶಿಸಿದ್ದಾರೆ. ಕೆಳಮಟ್ಟದ ರಾಜಕಾರಣ ಮಾಡುವ ಸಮಯ ಇದಲ್ಲ ಎಂದು ಸಚಿವ ಸಿ.ಸಿ. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ರಾಜಕಾರಣಿ ಎನಿಸಿರುವ ಎಚ್.ಕೆ. ಪಾಟೀಲ ಅವರು ಮಾತನಾಡುವ ಪರಿ ಕಂಡು ಶಾಕ್ ಆಗಿದೆ. ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರಿಂದ ಹೀಗೆ ಮಾತನಾಡಿ ಎಂಬ ಸಂದೇಶ ಬಂದಿರಬೇಕು. ಅವರು ಸ್ವಂತ ಬುದ್ಧಿಯಿಂದ ಮಾತನಾಡಿಲ್ಲ ಎಂದು ಹೇಳಿದರು. ವೆಂಟಿಲೇಟರ್​ಗಳನ್ನು ಡಬ್ಬಿಗಳಿಗೆ ಹೋಲಿಸಿರುವುದು ಬೇಸರ ಮೂಡಿಸಿದೆ. ನನಗೂ ಅವರಿಗಿಂತ ಚೆನ್ನಾಗಿ ಮಾತನಾಡಲು ಬರುತ್ತದೆ. ಆದರೆ, ರಾಜಕೀಯ ಮಾಡಲು ಇದು ಸಮಯವಲ್ಲ. ತಪ್ಪಾಗಿದ್ದರೆ ಸಲಹೆ ಕೊಡಬಹುದು ಎಂದರು.
ಸೋಂಕಿತರಿಗೆ ಔಷಧ ಕೊರತೆಯಾಗದಿರಲಿ
ಗದಗ: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ಔಷಧೋಪಚಾರ, ಶುದ್ಧ ಕುಡಿಯುವ ನೀರು, ಬಿಸಿ ನೀರಿನ ವ್ಯವಸ್ಥೆಯಾಗುವಂತೆ ಆಸ್ಪತ್ರೆಯ ಮುಖ್ಯಸ್ಥರು ನೋಡಿಕೊಳ್ಳಬೇಕು. ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಸಾಮಗ್ರಿಗಳಾಗಲಿ ಅಥವಾ ಔಷಧಗಳ ಕೊರತೆಯಾಗದಂತೆ ಮುಂಜಾಗ್ರತೆಯಿಂದ ಸಂಗ್ರಹವಾಗಿಟ್ಟುಕೊಳ್ಳಬೇಕು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
ನರಗುಂದ ಪಟ್ಟಣದ ಸಚಿವರ ಗೃಹ ಕಚೇರಿಯಿಂದ ಸೋಮವಾರ ಬೆಳಗ್ಗೆ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಜರುಗಿದ ವಿಡಿಯೋ ಕಾನ್ಪರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಪ್ರಮಾಣ, ಅಗತ್ಯ ಔಷಧ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ, ಲಸಿಕಾ ಅಭಿಯಾನ ಸೇರಿದಂತೆ ಇತರ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಅವರು ತಮ್ಮ ಕ್ಷೇತ್ರಗಳಲ್ಲಿನ ಸೋಂಕಿತರ ಸ್ಥಿತಿಗತಿ, ಚಿಕಿತ್ಸೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಸುಂದರೇಶ ಬಾಬು ಮಾತನಾಡಿ, ಜಿಲ್ಲೆಯಲ್ಲಿ 1000 ಕ್ಕೂ ಅಧಿಕ ಆಕ್ಸಿಜನ್ ಹಾಸಿಗೆಗಳಿವೆ. 70ಕ್ಕೂ ಅಧಿಕ ವೆಂಟಿಲೇಟರ್​ಗಳಿವೆ. ಜಿಲ್ಲೆಯ ವಿವಿಧೆಡೆ ಇರುವ ಕೋವಿಡ್ ಕೇರ್​ಕೇಂದ್ರಗಳಲ್ಲಿ ಒಟ್ಟಾರೆ 920 ಬೆಡ್​ಗಳ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಪೋಟೋ: ನರಗುಂದ ಪಟ್ಟಣದ ಗೃಹ ಕಚೇರಿಯಿಂದ ಸೋಮವಾರ ಬೆಳಗ್ಗೆ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸಿದರು. ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಸಭೆಯಲ್ಲಿ ಬಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net