

ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರಾವರಿ ಯೋಜನೆಯ 26 ಕೆರೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು ಸೋಮವಾರ ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ಬಿ.ಎಚ್.ರಸ್ತೆಯ ಮತಿಘಟ್ಟ ಗೇಟ್, ಖಾಸಗಿ ಬಸ್ ನಿಲ್ದಾಣದಿಂದ ನೆಹರು ವೃತ್ತಕ್ಕೆ ಆಗಮಿಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿ ಮಾಜಿ ಶಾಸಕ ಬಿ.ಲಕ್ಕಪ್ಪ, ಜನರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರ ಹಾಗೂ ಜನಪ್ರತಿನಿಧಿ, ಅಧಿಕಾರಿಗಳ ಕರ್ತವ್ಯ. ತಾಲೂಕಿನಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಇಲ್ಲವೆಂದು 2003&04ರಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಪರಿಣಾಮ ಈ ಯೋಜನೆ ಮಂಜೂರಾಗಿ ಕಾಮಗಾರಿ ಆರಂಭವಾಗದರೂ ಪೂರ್ಣಗೊಳಿಸದೆ ಅರ್ಧಕ್ಕೆ ನಿಂತಿದೆ. ಹಾಗಾಗಿ ಹೋರಾಟ ಆರಂಭಿಸಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಿ ಯೋಜನೆ ಪೂರ್ಣಗೊಳಿಸಬೇಕು ಎಂದರು. ಹೇಮಾವತಿ ನೀರಾವರಿ ಹೋರಾಟದ ಸಂಚಾಲಕ ಮಧು ಮಾತನಾಡಿ, 13 ವರ್ಷಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲವೆಂದರೆ ಇದಕ್ಕೆ ಯಾರು ಹೊಣೆ. ನಮ್ಮ ಹೋರಾಟ ನೀರಿಗಾಗಿ ಮಾತ್ರ. ಇನ್ನಾದರು ಎಚ್ಚೇತ್ತುಕೊಂಡು ಕಾಮಗಾರಿ ಪೂರ್ಣಗೊಳಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದರು.
ವಕೀಲ ಎಂ.ಬಿ.ನಾಗರಾಜು ಮಾತನಾಡಿ, ಹೇಮಾವತಿ ನೀರಾವರಿ ಹೋರಾಟ 2003ರಿಂದಲು ಪ್ರಾರಂಭವಾಯಿತು. 2 ಹಂತದಲ್ಲಿ 26 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಸರ್ಕಾರ ಹಣ ಬಿಡುಗಡೆ ಮಾಡಿತು. ಅದರಂತೆ ಏತ ನೀರಾವರಿಯ ಮೂಲಕ ನಾಲ್ಕು ಕೆರೆಗಳಿಗೆ ಹಾಗೂ ಉಳಿದ 22 ಕೆರೆಗಳಿಗೆ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಕೇವಲ ಶೆಟ್ಟಿಕೆರೆ ಭಾಗದ ಕಾಮಗಾರಿ ಮಾಡಿದ್ದು, ಉಳಿದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂದರು.
ಹೇಮಾವತಿ ಮುಖ್ಯ ಚಾನಲ್ ಕುಂದೂರು ಬಳಿಯಿಂದ 13 ಕಿ.ಮೀ ದೂರದಲ್ಲಿರುವ ನಮ್ಮ ಭಾಗಕ್ಕೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಆದರೆ ತುಮಕೂರು, ಶಿರಾ ಭಾಗಕ್ಕೆ ಹರಿಸಲಾಗುತ್ತಿದೆ. ಈಗ ಕನಕಪುರದ ಕಡೆಗೂ ಹೇಮಾವತಿ ಲಿಂಕ್ಕೆನಾಲ್ ಮಾಡಲಾಗುತ್ತಿದೆ. ನಮ್ಮ ಭಾಗಕ್ಕೆ ಹಂಚಿಕೆಯಾಗಿರುವ ನೀರನ್ನು ಹರಿಸಿ ನಂತರ ನಿಮ್ಮಯೋಜನೆ ಮಾಡಿಕೊಳ್ಳಿ. ಅಲ್ಲಿಯವರೆಗೆ ಯಾವುದೇ ಹೇಮಾವತಿ ಕಾಮಗಾರಿ ನಡೆಸಲು ಜಿಲ್ಲೆಯಲ್ಲಿ ಬಿಡುವುದಿಲ್ಲ ಎಂದರು.
ರಸ್ತೆತಡೆಗೆ ಪ್ರಯತ್ನಿಸಿದ ರೈತರನ್ನು ತಡೆಯಲು ಪೊಲೀಸರು ಮುಂದಾದಾಗ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ತಾಲೂಕು ಆಡಳಿತ ಕಚೇರಿ ಬಳಿ ಬಂದು ಗ್ರೇಡ್-&2 ತಹಸೀಲ್ದಾರ್ ಕೀರ್ತಿ, ಹೇಮಾವತಿ ಇಂಜಿನಿಯರ್ ಅಂಜನ್ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕೆಆರ್ಎಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ದೇವರಾಜು, ತರಬೇನಹಳ್ಳಿ ಷಡಾಕ್ಷರಿ, ಕೆಡಿಪಿ ಮಾಜಿ ಸದಸ್ಯ ರಾಮದಾಸ್, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಎಂ.ಎಸ್.ರವಿಕುಮಾರ್, ಕೃಷ್ಣೇಗೌಡ, ರಮೇಶ್, ವಕೀಲ ಚಿಕ್ಕಣ್ಣ, ಬಸವರಾಜು, ಕುಮಾರಸ್ವಾಮಿ ಇದ್ದರು.