

ಸಿಂಧನೂರು: ಸತತ ಮಳೆಯಿಂದ ಅಪಾರ ಬೆಳೆಹಾನಿಯಾಗಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಿಗಿ ಒತ್ತಾಯಿಸಿದರು.
ಇದನ್ನೂ ಓದಿ:ಜಲಾವೃತ ಸೇತುವೆ, ಬೆಳೆಹಾನಿ ವೀಕ್ಷಣೆ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿಯಿಂದ ಹತ್ತಿ ಸಂಪೂರ್ಣ ಹಾಳಾಗಿದೆ. ಭತ್ತಕ್ಕೆ ವೈರಸ್ ಹರಡಿದ್ದು, ತೊಗರಿ ಒಣಗಿದೆ. ಮೂರು ಬಾರಿ ಬಿತ್ತಿದರೂ ಜೋಳ ಭೂಮಿಯಿಂದ ಮೇಲಕ್ಕೆ ಬಂದಿಲ್ಲ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ. ರೈತರು ಹತ್ತಿಗೆ 60 ಸಾವಿರ ರೂ., ಭತ್ತಕ್ಕೆ 40 ಸಾವಿರ ರೂ., ತೊಗರಿಗೆ 25 ಸಾವಿರ ರೂ., ಕಡಲೆಗೆ 20 ಸಾವಿರ ರೂ. ಖರ್ಚು ಮಾಡಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದು ಹೆಕ್ಟೇರ್ ಒಣಭೂಮಿಗೆ 17 ಸಾವಿರ ರೂ., ನೀರಾವರಿಗೆ 30 ಸಾವಿರ ರೂ. ಪರಿಹಾರ ನೀಡಿದರೆ ಬೀಜ ಮತ್ತು ರಸಗೊಬ್ಬರಕ್ಕೆ ಪಾವತಿಸಲು ಆಗುವುದಿಲ್ಲ. ಓಬೇರಾಯ ಕಾಲದ ಪರಿಹಾರ ಮೊತ್ತ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕೂಡಲೇ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಹಾನಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಸಾಲವನ್ನೂ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ರಾಮತ್ನಾಳ ಗ್ರಾಪಂ ಸದಸ್ಯ ದೇವರಾಜ ರಾಮತ್ನಾಳ, ಪ್ರಮುಖರಾದ ನಾರಾಯಣರೆಡ್ಡಿ ಧುಮತಿ, ವೀರೇಶ ಜಾಲಿಹಾಳ, ಖಾದರ್‌ಸಾಬ್ ಜಾಲಿಹಾಳ ಇತರರಿದ್ದರು.