

ಹಿರೇಕೆರೂರ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಹತ್ತಿ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ಹಾನಿಯಾಗಿವೆ.
ಅ. 1ರಿಂದ ಇಲ್ಲಿಯವರೆಗೆ ಒಟ್ಟು 81 ಮನೆಗಳಿಗೆ ಹಾನಿಯಾಗಿದ್ದು, 2 ದನದ ಕೊಟ್ಟಿಗೆ ಧರೆಗುರುಳಿವೆ. ಪಟ್ಟಣದ ದುರ್ಗಾದೇವಿ ಕೆರೆ ಸೇರಿದಂತೆ ತಾಲೂಕಿನ ಬಸರೀಹಳ್ಳಿ, ಹೊಲಬಿಕೊಂಡ, ನಿಡನೇಗಿಲು, ಕೋಡ, ಹೊಸೂರು, ಕಚವಿ ಗ್ರಾಮದ ಕೆರೆಗಳು ಭರ್ತಿಯಾಗಿವೆ. ಈ ಕೆರೆಗಳ ಕೋಡಿ ಹರಿದು ಜಮೀನುಗಳಿಗೆ ನೀರು ನುಗ್ಗಿ, ಮೆಕ್ಕೆಜೋಳ, ಹತ್ತಿ, ಕಬ್ಬು, ಅಡಕೆ, ಬಾಳೆ, ಭತ್ತ ಮತ್ತು ತರಕಾರಿ ಬೆಳೆಗಳು ಹಾಳಾಗಿವೆ.
ಪಟ್ಟಣದ ದುರ್ಗಾದೇವಿ ಕೆರೆ ಕೋಡಿ ಹರಿದು, ಬಸರೀಹಳ್ಳಿ ಕೆರೆ ಮೂಲಕ ಗ್ರಾಮದ ಮನೆಗಳಿಗೆ ನೀರು ನುಗ್ಗಿ ತೊಂದರೆ ಮಾಡಿದೆ. ಕೋಡ ಗ್ರಾಮದ ಹೊರಭಾಗದಲ್ಲಿನ ನಾಡಿಗೇರ ಕಟ್ಟೆ ತುಂಬಿದ್ದು, ನೀರು ಹರಿಯಲು ವಾಡಿದ್ದ ಮೋರಿ ಬಂದ್ ವಾಡಿದ್ದರಿಂದ, ಹುಚ್ಚನಗೌಡ ಚಂದ್ರಗೌಡ ಕಬ್ಬಕ್ಕಿ ಅವರ 4.29 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ನೀರು ಪಾಲಾಗಿದೆ. ಬಸನಗೌಡ ಹನುಮಗೌಡ ಕಬ್ಬಕ್ಕಿ ಅವರ ಮೆಕ್ಕೆಜೋಳ, ಶಿವನಗೌಡ ರುದ್ರಗೌಡ ಹೊಸಳ್ಳಿ ಎಂಬುವವರ 1.18 ಗುಂಟೆ ಅಡಕೆ ಬೆಳೆ ಜಲಾವೃತಗೊಂಡಿದೆ. ಅಕ್ಕಪಕ್ಕದ ಸುವಾರು 30 ಎಕರೆಯಲ್ಲಿ ಬೆಳೆದ ಕಬ್ಬು, ಅಡಕೆ, ಮೆಕ್ಕೆಜೋಳ ಬೆಳೆ ನೀರಿಗೆ ಆಹುತಿಯಾಗಿವೆ.
ಕೋಡ-ರಾಣೆಬೆನ್ನೂರು ವಾರ್ಗದ ಉಜನಿಪುರ ಕ್ರಾಸ್ ಸಮೀಪ ರಾಜ್ಯ ಹೆದ್ದಾರಿಯ ಮೇಲೆ ನೀರು ಹರಿದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕಚವಿ ಗ್ರಾಮದಲ್ಲಿ ಕೆರೆ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಟನಾ ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿ ಪರಿಶೀಲಿಸಿದರು. ಹೊಸೂರು ಕೆರೆಗೆ ತಹಸೀಲ್ದಾರ್ ಎಚ್. ಪ್ರಭಾಕರಗೌಡ ಭೇಟಿ ನೀಡಿ ಪರಿಶೀಲಿಸಿದ್ದು, ಕೃಷಿ, ತೋಟಗಾರಿಕಾ, ಕಂದಾಯ ಮತ್ತು ಪಿಡಿಒಗಳು ಬೆಳೆ ಹಾನಿಯಾದ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.