ಸಿಆರ್‌ಎಫ್ ಅನುದಾನದ ರಸ್ತೆ ಕಾಮಗಾರಿ ಪೂರ್ಣಗೊಳಿಸಿ

h6-joshi meeting 2
Published on

ಹುಬ್ಬಳ್ಳಿ: ಸಿಆರ್‌ಎಫ್ ಅನುದಾನದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವು ಕಡೆ ಭೂಸ್ವಾಧೀನ ಆಗಿಲ್ಲವೆನ್ನುವುದು ಸರಿಯಲ್ಲ. 6 ತಿಂಗಳಿಂದ ಇದನ್ನೇ ಕೇಳುತ್ತಿದ್ದೇನೆ. ಉಣಕಲ್, ತತ್ವದರ್ಶ ಆಸ್ಪತ್ರೆ ಸೇರಿ ವಿವಿಧೆಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಆಗದೇ ಇರುವ ಜಾಗ ಬಿಟ್ಟು ಬೇರೆಡೆ ಕಾಮಗಾರಿ ನಡೆಸಿ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಯಾವ ಕೆಲಸ ಆಗಿಲ್ಲವೋ ಅವುಗಳನ್ನು ಗಮನಕ್ಕೆ ತೆಗೆದುಕೊಂಡು ಬನ್ನಿ. ಕೆಲವೆಡೆ ಅನುದಾನ ಕೊಟ್ಟರೂ ಕೆಲಸ ಆಗುತ್ತಿಲ್ಲ ಏಕೆ? ರಾಷ್ಟ್ರೀಯ ಹೆದ್ದಾರಿಯ 15 ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದು ಗಮನಕ್ಕಿದೆ ಎಂದರು. ಇದಕ್ಕೆ ಉತ್ತರಿಸಿದ ಎನ್‌ಎಚ್‌ಎಎ ಅಧಿಕಾರಿ, ಮೂರು ಹಂತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಹಾಗಾಗಿ ನಿಧನವಾಗುತ್ತಿದೆ. ತ್ವರಿತವಾಗಿ ಪರಿಹಾರ ಕೊಟ್ಟು ಕಾಮಗಾರಿ ಆರಂಭಿಸುವುದಾಗಿ ಹೇಳಿಕೊಂಡರು.
ಕೆಲವು ಕಾಮಗಾರಿಗಳು ನಡೆದಿಲ್ಲ. ಅವುಗಳ ಬಗ್ಗೆ ಶಾಸಕರೊಂದಿಗೆ ಕುಳಿತುಕೊಂಡು ಚರ್ಚಿಸಿ ನಿರ್ಧರಿಸಬೇಕು. ಅಂಡರ್‌ಪಾಸ್, ಪಾದಚಾರಿ ಮಾರ್ಗ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು. ಒಂದು ವೇಳೆ ಯಾವುದೇ ಅಡ್ಡಿ ಬಂದರೆ ನನ್ನ ಗಮನಕ್ಕೆ ತರಬೇಕು. ಈ ಕುರಿತು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಸಚಿವರು, ಅಧಿಕಾರಿಗಳಿಗೆ ತಿಳಿಸಿದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದಿವ್ಯಪ್ರಭು ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net