

ಮೂಡಿಗೆರೆ: ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಶುಕ್ರವಾರ ಪಟ್ಟಣ ಸಂಪೂರ್ಣ ಸ್ತಬ್ಧಗೊಂಡಿತ್ತು. ಶಾಲೆ-ಕಾಲೇಜಿಗೆ ಜಿಲ್ಲಾಡಳಿತ ರಜೆ ಘೋಷಿಸದಿರುವುದರಿಂದ ವಿದ್ಯಾರ್ಥಿಗಳು ಪರದಾಡಬೇಕಾಯಿತು. ಆಟೋ ಹಾಗೂ ಇತರೆ ಬಾಡಿಗೆ ವಾಹನಗಳ ಸಂಚಾರ ಎಂದಿನಂತಿತ್ತು. ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
9 ಗಂಟೆ ನಂತರ ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದರು. ವಾಹನ ಸಂಚಾರ ಕಡಿಮೆಯಾಗಿದ್ದರಿಂದ ಜನ ಪಟ್ಟಣಕ್ಕೆ ಬರಲು ಸಾಧ್ಯವಾಗದೆ ರಸ್ತೆಗಳು ಬೀಕೋ ಎನ್ನುತ್ತಿದ್ದವು. ಶುಕ್ರವಾರ ವಾರದ ಸಂತೆ ಹಿನ್ನಲೆಯಲ್ಲಿ ಬೆಳಗ್ಗೆ ವ್ಯಾಪಾರಿಗಳು ಬಂದಾಗ ರೈ ಸಂಘ, ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರಿಗೆ ಸಂತೆಯಲ್ಲಿ ಭಾಗವಹಿಸದೆ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ವ್ಯಾಪಾರಿಗಳಿಗೆ ಮನವಿ ಮಾಡಿದರು.
ಪ್ರತಿಭಟನಾಕಾರರು ತೆರಳಿದ ನಂತರ ವ್ಯಾಪಾರಿಗಳು ಟೆಂಟ್ ಹಾಕಿ ವ್ಯಾಪಾರ ಆರಂಭಿಸಿದರು. ಬಸ್‌ಸಂಚಾರ ಇಲ್ಲದಿದ್ದರಿಂದ ಗ್ರಾಮೀಣ ಭಾಗದ ಜನ ಸಂತೆಗೆ ಬರಲಿಲ್ಲ. ಶಾಲೆ-ಕಾಲೇಜಿಗೆ ರಜೆ ನೀಡದ ಜಿಲ್ಲಾಡಳಿತದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಟೋ ಮತ್ತಿತರರ ಬಾಡಿಗೆ ವಾಹನದಲ್ಲಿ ಶಾಲೆಗೆ ಬಂದರು. ಖಾಸಗಿ ಶಾಲೆ-ಕಾಲೇಜಿಗೆ ಬೆಳಗ್ಗೆ 11ರಿಂದ ರಜೆ ನೀಡಲಾಯಿತು. ಸರ್ಕಾರಿ ಶಾಲೆ-ಕಾಲೇಜು ತೆರೆದಿದ್ದರೂ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಹಾಜರಾಗಲಿಲ್ಲ. ಹ್ಯಾಂಡ್‌ಪೋಸ್ಟ್, ಜನ್ನಾಪುರ ಸೇರಿದಂತೆ ಕೆಲವೆಡೆ ಬಂದ್ ಯಶಸ್ವಿಯಾಯಿತು. ಗೋಣಿಬೀಡು ಪಟ್ಟಣದಲ್ಲಿ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚದೆ ಎಂದಿನಂತೆ ವ್ಯಾಪಾರ ನಡೆಸಿದರು.
ಮಧ್ಯಾಹ್ನ 12ಕ್ಕೆ ರೈತ ಸಂಘದ ವನ ಶ್ರೀಲಕ್ಷ್ಮಣಗೌಡ, ಬಿ.ಸಿ.ದಯಾಕರ್, ಡಿ.ಕೆ.ಲಕ್ಷ್ಮಣಗೌಡ, ಕೆಂಪೇಗೌಡ ಒಕ್ಕಲಿಗರ ವೇದಿಕೆ ತಾಲೂಕು ಅಧ್ಯಕ್ಷ ಬ್ರಿಜೇಶ್, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಸುಧೀರ್ ಕಡಿದಾಳು ಸೇರಿದಂತೆ 15 ಮಂದಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ತಿಪ್ಪೇಸ್ವಾಮಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.