

ಮಡಿಕೇರಿ:
ಕೊಡಗಿನಲ್ಲಿ ಪ್ರಕೃತಿಗೆ ಪೂರಕ ಸುಸ್ಥಿರ ಅಭಿವೃದ್ಧಿ ತನ್ನ ಚಿಂತನೆಯಾಗಿದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಇಲ್ಲಿನ ಕಾವೇರಿ ಹಾಲ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಮೈಸೂರು ಸಂಸ್ಥಾನಕ್ಕೆ ಕೊಡಗು ಸೇರಿರಲಿಲ್ಲ. ಹಾಗಾಗಿ ಕೊಡಗಿನ ಜತೆ ಆಡಳಿತಾತ್ಮಕವಾಗಿ ಮೈಸೂರು ಸಂಸ್ಥಾನದ ನಂಟು ಅಷ್ಟಾಗಿ ಇಲ್ಲ. ಆದರೆ ಬಾಲ್ಯದಿಂದಲೂ ತನಗೆ ಜಿಲ್ಲೆಯ ಜತೆಗೆ ಭಾವನಾತ್ಮಕ ನಂಟು ಇದೆ. ಮಾದಾಪುರ, ಸುಂಟಿಕೊಪ್ಪ, ಸೋಮವಾರಪೇಟೆ, ನಾಗರಹೊಳೆ, ಕುಟ್ಟ, ಶ್ರೀಮಂಗಲ ಭಾಗಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ಇಲ್ಲಿಯ ಪ್ರದೇಶಗಳಲ್ಲಿ ಸಾಕಷ್ಟು ಸುತ್ತಾಡಿದ್ದೇನೆ. ಇಲ್ಲಿಯ ಪ್ರಕೃತಿ, ವನ್ಯಜೀವಿ ಸಂಪತ್ತು ತುಂಬಾ ಇಷ್ಟ ಎಂದು ನೆನಪಿಸಿಕೊಂಡ ಯದುವೀರ, ಪ್ರಾಕೃತಿಕ ಶ್ರೀಮಂತಿಕೆ ಹೊಂದಿರುವ ಮತ್ತು ದೇಶದ ಸೇನೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕೊಡಗಿಗೆ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಕೊಡಗು ಕೊಡಗಾಗಿಯೇ ಉಳಿಯಬೇಕು ಎನ್ನುವುದು ತನ್ನ ಕಾಳಜಿಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಕೊಡಗಿನ ಸಂಸ್ಕೃತಿ, ಪರಂಪರೆ, ಪರಿಸರ, ವನ್ಯಜೀವಿ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಮಾತಿಗಿಂತ ಕೆಲಸ ಮುಖ್ಯ ಎನ್ನುವಂತೆ ನಡೆದುಕೊಳ್ಳಲಾಗುವುದು ಎಂದರು.
ಇದಕ್ಕೂ ಮೊದಲು ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಗೌಡ, ಹಿಂದುಳಿದ ವರ್ಗದವರ ವಿಚಾರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರದಾನ ಮಂತ್ರಿ ನರೇಂದ್ರ ಮೋದಿ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲಾಗಿದೆ. ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡುವ ಕೆಲಸ ಬಿಜೆಪಿಯಿಂದ ಆಗುತ್ತದೆ. ಕಾಂಗ್ರೆಸ್ ತುಷ್ಠೀಕರಣ ರಾಜಕೀಯ ಮಾಡುತ್ತಾ ಹಿಂದುಳಿದ ವರ್ಗದವರನ್ನು ಮರೆತಿದೆ. ಹಿಂದುಳಿದ ವರ್ಗದ ಬಗ್ಗೆ ಮಾತನಾಡುವ ಕಾಂಗ್ರೆಸ್, ಅವರಿಗೆ ಎಷ್ಟು ಅವಕಾಶ ಕೊಟ್ಟಿದೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ರಾಮದಾಸ್ ಮಾತನಾಡಿ, ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆ. ೩೦ ಲಕ್ಷ ಜನ ಈ ಯೋಜನೆಗೆ ಅರ್ಜಿ ಹಾಕಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರೂ ಅರ್ಜಿ ಹಾಕುವ ಅವಕಾಶ ಇರುತ್ತದೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿರುವ ಯದುವೀರ್ ಅವರ ಸೇವೆ ಕೊಡಗಿನ ಮೂಲಕ ಭಾರತಕ್ಕೂ ಲಭಿಸುವಂತಾಗಲಿ ಎಂದು ಆಶಿಸಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ ಬಿಜೆಪಿ ಅಭ್ಯರ್ಥಿ ವಿರುದ್ಧ ಮಾತನಾಡಲು ಯಾವುದೇ ವಿಷಯ ಇಲ್ಲ. ಹಾಗಾಗಿ ಕೆಲವರು ಈಗಾಗಲೆ ವ್ಯವಸ್ಥಿತ ಅಪಪ್ರಚಾರ ಶುರು ಮಾಡಿದಾರೆ. ಇದಕ್ಕೆ ಕಾರ್ಯಕರ್ತರು ಕಿವಿ ಕೊಡಬಾರದು. ಅತಿ ವಿಶ್ವಾಸ ಇರಬಾರದು ಎನ್ನುವುದು ಹಿಂದಿನ ಅನುಭವಗಳು ಕಲಿಸಿರುವ ಪಾಠವಾಗಿದೆ. ಮತ್ತೂಮ್ಮೆ ಮೋದಿ ಪ್ರಧಾನಿ ಆಗಬೇಕು. ಇದಕ್ಕಾಗಿ ಯದುವೀರ್ ಅವರನ್ನು ೩ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ ಕೊಡಗಿನ ಬಿಜೆಪಿ ಕಾರ್ಯಕರ್ತರು ಗೌರವದ ನಿರೀಕ್ಷೆ ಇಟ್ಟುಕೊಂಡು ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡುತ್ತಾರೆ. ಇದನ್ನು ಹೊರತುಪಡಿಸಿ ಇಲ್ಲಿಯವರು ಬೇರೆ ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ನಮ್ಮ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳಿಗೆ ಈಗ ಜಿಲ್ಲೆಯಲ್ಲಿ ಗುದ್ದಲಿ ಪೂಜೆಗಳು ನಡೆಯುತ್ತಿವೆ. ಈಗಿನ ಸರ್ಕಾರದಿಂದ ಒಂದು ಪೈಸೆಯೂ ಬಂದಿಲ್ಲ ಎಂದರು.
ರಾಜ್ಯ ಘಟಕದ ಅಧ್ಯಕ್ಷ ರಘು ಕೌಟಿಲ್ಯ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ರೂಪಿಸಿದ ಎಲ್ಲಾ ಯೋಜನೆಗಳು ಹಿಂದುಳಿದ ವರ್ಗದವರನ್ನು ಒಳಗೊಂಡು ರೂಪಿಸಲಾಗಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವ ಸಂಕಲ್ಪ ಹಿಂದುಳಿದ ವರ್ಗ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಅಪ್ರು ರವೀಂದ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂ.ಎಲ್.ಸಿ ಸುನೀಲ್ ಸುಬ್ರಮಣಿ, ಎಸ್.ಜಿ. ಮೃದಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಒಬಿಸಿ ಮೋರ್ಚಾ ಕಾರ್ಯದರ್ಶಿ ರಘು, ಕಾರ್ಯದರ್ಶಿ ಸೋಮಶೇಖರ್, ಪ್ರಮಖರಾದ ವಿಠಲ್ ಪೂಜಾರಿ, ನಾರಾಯಣ, ಮೈ. ವಿ. ರವಿಶಂಕರ್, ಮನು ಮುತ್ತಪ್ಪ, ನೆಲ್ಲೀರ ಚರಣ್, ರೀನಾ ಪ್ರಕಾಶ್ ಮತ್ತಿತರರು ಇದ್ದರು.