ದೂರು ಕೇಳಿ ಬಂದರೆ ಸಹಿಸುವುದಿಲ್ಲ, ಲಂಚ ಪಡೆದರೆ ಕಠಿಣ ಕ್ರಮ

mla (1)111
Published on

ಚಿತ್ರದುರ್ಗ: ಇದು ಸರ್ಕಾರಿ ಆಸ್ಪತ್ರೆ. ಉಚಿತ ಚಿಕಿತ್ಸೆ ನೀಡಬೇಕಾದ್ದು, ವೈದ್ಯರು, ಶುಶ್ರೂಷಕರ ಕರ್ತವ್ಯ. ವ್ಯವಹರಿಸುವ (ಬಿಸಿನೆಸ್) ಜಾಗ ಮಾಡಿಕೊಂಡು ಬಡರೋಗಿಗಳಿಂದ ಲಂಚ ಪಡೆಯುತ್ತಿರುವ ಕುರಿತು ದೂರುಗಳಿವೆ. ಸಿಕ್ಕಿ ಬಿದ್ದರೆ ಮೂಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಡಿಎಸ್ ಮತ್ತು ವೈದ್ಯರಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಅವರು, ರೋಗಿಗಳ ಸಮಸ್ಯೆ ಆಲಿಸಿದರು. ದೂರುಗಳ ಕುರಿತು ಸ್ವತಃ ಮಾಹಿತಿ ಪಡೆಯಲು ಸಾರ್ವಜನಿಕರೊಂದಿಗೆ ಕೆಲಕಾಲ ಚರ್ಚಿಸಿದರು.

ಕೀಲು, ಮೂಳೆ ಮತ್ತು ಹೆರಿಗೆ ವಿಭಾಗಗಳಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಒಂದು ಶಸ್ತ್ರಚಿಕಿತ್ಸೆಗೆ ಕನಿಷ್ಠ 5ರಿಂದ 10 ಸಾವಿರ ರೂ. ಲಂಚ ಕೇಳುತ್ತಾರೆ, ಪಡೆಯುತ್ತಾರೆ ಎಂಬ ದೂರು ಪದೇ ಪದೆ ಕೇಳಿಬರುತ್ತಿದೆ. ಸರ್ಕಾರ ನಿಮಗೆಲ್ಲಾ ವೇತನ ಏಕೆ ಕೊಡುತ್ತಿದೆ?. ಬಡವರಿಂದ ಹಣ ಕಿತ್ತುಕೊಂಡರೆ ಶಾಪ ತಟ್ಟದೇ ಇರದು. ಸಾಲ ಮಾಡಿ ತಂದುಕೊಡುತ್ತಿರುವುದಾಗಿ ಕೆಲವರು ಹೇಳುತ್ತಿದ್ದಾರೆ. ಭ್ರಷ್ಟಾಚಾರದಂತ ದುರಾಭ್ಯಾಸ ಬಿಡದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಕಿಡಿಕಾರಿದರು.

ನಮ್ಮದು ಹಿಂದುಳಿದ ಜಿಲ್ಲೆಯಾಗಿದ್ದು, ಅತಿ ಹೆಚ್ಚು ಬಡವರಿದ್ದಾರೆ. ಚಿತ್ರದುರ್ಗ ಅಷ್ಟೇ ಅಲ್ಲದೆ, ಎಲ್ಲಾ ತಾಲೂಕುಗಳ ಗ್ರಾಮಗಳಿಂದ ನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಹಣ ನೀಡದಿದ್ದರೆ ಚಿಕಿತ್ಸೆಯನ್ನೂ ನೀಡುವುದಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಈ ವಿಚಾರವಾಗಿ ಬೆಂಗಳೂರು, ಮಣಿಪಾಲ್, ಇತರೆಡೆಗೆ ಶಿಫಾರಸು ಮಾಡಿ ಕೈತೊಳೆದುಕೊಳ್ಳಲು ಮುಂದಾದರೆ ಗ್ರಹಚಾರ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

ಕೀಲು-ಮೂಳೆ ಸೇರಿ ಇತರೆ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಕಳೆದ ಅನೇಕ ವರ್ಷಗಳಿಂದ ಖರೀದಿಸುತ್ತಿರುವ ವೈದ್ಯೋಪಕರಣಗಳು ಕೆಲವೇ ತಿಂಗಳಲ್ಲಿ ಮೂಲೆ ಗುಂಪಾಗುತ್ತಿವೆ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆ. ಸರಬರಾಜು ಮಾಡುತ್ತಿರುವ ಕಂಪನಿ ಯೋಗ್ಯವಾದ ವಸ್ತುಗಳನ್ನು ನೀಡುತ್ತಿದೆಯೇ ಎಂಬುದನ್ನು ಕೂಡ ಪರಿಶೀಲಿಸುತ್ತಿಲ್ಲ. ಬೇಜವಾಬ್ದಾರಿಯಿಂದ ಕೆಲಸ ಮಾಡಿದರೆ ರೋಗಿಗಳಿಗೆ ತೊಂದರೆ. ಕೂಡಲೇ ಹಿಂದೆ ಖರೀದಿಸಲಾದ ವಸ್ತುಗಳ ಸಂಪೂರ್ಣ ವಿವರ, ಗುಣಮಟ್ಟ, ಕಳಪೆಯಾಗಿದ್ದರೆ ಯಾವ ಕಾರಣಕ್ಕೂ ಹಣ ಬಿಡುಗಡೆ ಮಾಡುವಂತಿಲ್ಲ. ಈ ವರದಿ ಕೂಡಲೇ ಸಲ್ಲಿಸಿ ಎಂದು ಡಿಎಸ್‌ಗೆ ಸೂಚನೆ ನೀಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜಪ್ಪ, ಆರ್‌ಎಂಒ ಡಾ.ಆನಂದ್ ಪ್ರಕಾಶ್, ಡಿಎನ್‌ಬಿ ನೋಡಲ್ ಅಧಿಕಾರಿ ಡಾ.ಶ್ರೀರಾಮ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್, ನಗರಸಭೆ ಸದಸ್ಯ ಹರೀಶ್, ಮುಖಂಡರಾದ ಪರಮೇಶ್, ವೀರೇಶ್, ರವಿಕುಮಾರ್ ಇತರರಿದ್ದರು.

ಸಿಜೇರಿಯನ್ ಕಡಿಮೆ ಮಾಡಿ

ಆದಷ್ಟೂ ಶಸ್ತ್ರಚಿಕಿತ್ಸೆ ರಹಿತ ಸಾಮಾನ್ಯ ಹೆರಿಗೆ ಮಾಡಿಸಲು ಹೆಚ್ಚಿನ ಒತ್ತು ನೀಡಬೇಕು. ನಿಮ್ಮ ಸ್ವಾರ್ಥಕ್ಕಾಗಿ ಸಿಜೇರಿಯನ್ ಮಾಡಬೇಡಿ. ತಾಯಿ, ಮಗುವಿನ ಪ್ರಾಣಕ್ಕೆ ಅಪಾಯ ಇದ್ದಂತಹ ಸಂದರ್ಭದಲ್ಲಿ ಅನಿವಾರ್ಯವಿದ್ದಾಗ ಮಾಡಿದಲ್ಲಿ ತಪ್ಪಿಲ್ಲ. ಆದರೆ, ಪ್ರತಿ ಕೇಸಿಗೂ ಇದು ಅನ್ವಯಿಸುವುದಿಲ್ಲ. ಒಟ್ಟು 6 ಮಂದಿ ಪ್ರಸೂತಿ ತಜ್ಞರಿದ್ದು, ಸಮಯ ನಿಗದಿ ಮಾಡಿಕೊಂಡು ರೋಗಿಗಳಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಬೇಕು. ಎಲ್ಲಾ ವೈದ್ಯರು ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಶಾಸಕರು ತಾಕೀತು ಮಾಡಿದರು.

ಡಿಎಸ್ ಆಡಳಿತ ವಿಫಲ

ಜಿಲ್ಲಾಸ್ಪತ್ರೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ವಿಫಲರಾಗಿದ್ದಾರೆ. ಕೆಲವರನ್ನು ಎದುರಿಸಲು ಸಾಧ್ಯವಾಗದೆ, ಕೆಲಸ ಪಡೆಯುವಲ್ಲಿಯೂ ನಿರ್ಲಕ್ಷೆೃ ತೋರಿದ್ದೀರಿ. ಈ ರೀತಿಯಾದರೆ, ಇಲ್ಲಿ ಇರುವ ಅಗತ್ಯವಿಲ್ಲ. ವರ್ಗಾವಣೆ ಮಾಡಿಸಿಕೊಂಡು ಹೋಗಿ. ಕೈಲಾಗದವರು ಇದ್ದರೆ ರೋಗಿಗಳಿಗೆ ತೊಂದರೆ. ನಮಗೆ ಬಡವರ ಯೋಗಕ್ಷೇಮ ಮುಖ್ಯವೇ ಹೊರತು ಯಾರನ್ನು ಹೊಗಳಲಿಕ್ಕಾಗಲಿ, ತೆಗಳಲಿಕ್ಕಾಗಲಿ ಭೇಟಿ ನೀಡಿಲ್ಲ ಎಂದು ತಿಪ್ಪಾರೆಡ್ಡಿ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net