

ಮಡಿಕೇರಿ: ಹಿಂದೂ ಸಂಘಟನೆಯ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೊಡಗು ಜಿಲ್ಲಾ ವುಮೆನ್ ಇಂಡಿಯಾ ಮೂವ್ ಮೆಂಟ್ ಸಂಘಟನೆಯ ಅಧ್ಯಕ್ಷೆ ಎಂ.ಇ.ಸಲಿಕತ್ ದೂರು ನೀಡಿದರು.
ಮುಸ್ಲಿಂ ಮಹಿಳೆಯರು ಹಾಗೂ ಯುವತಿಯರನ್ನು ಅವಮಾನಿಸಿದ ಮತ್ತು ಅಶಾಂತಿಗೆ ಪ್ರಚೋದನೆ ನೀಡುತ್ತಿರುವ ಆರೋಪದಡಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲವ್ ಜಿಹಾದ್ ಕುರಿತು ಉಲ್ಲೇಖಿಸಿ ಮುಸ್ಲಿಂ ಯುವತಿಯರನ್ನು ಅವಮಾನಿಸಿದ್ದಾರೆ. ತ್ರಿವಳಿ ತಲಾಕ್ ರದ್ದುಪಡಿಸಿರುವ ಕ್ರಮವನ್ನು ಪ್ರಸ್ತಾಪಿಸಿ ಮಹಿಳೆಯರ ವೈವಾಹಿಕ ಜೀವನದ ಕುರಿತು ಅತ್ಯಂತ ಕೀಳಾಗಿ ಮಾತನಾಡಿದ್ದಾರೆ. ದೇಶದ್ರೋಹದ ಆರೋಪ ಹೊರಿಸುವ ಮೂಲಕ ಮುಸ್ಲಿಂ ಸಮುದಾಯದ ಸಾಂವಿಧಾನಿಕವಾದ ಬದುಕುವ ಹಕ್ಕಿನ ಮೇಲೆ ದಾಳಿಗೆ ಪ್ರಚೋದಿಸುವ ಕೃತ್ಯ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ೧೦ ಸಾವಿರ ಕೋಟಿ ರೂ.ಗಳನ್ನು ಮುಸ್ಲಿಮರಿಗೆ ಮೀಸಲಿಟ್ಟಿದ್ದಾರೆ ಎಂದು ಅಪಪ್ರಚಾರ ಮಾಡುವ ಮೂಲಕ ಮುಸಲ್ಮಾನರ ಮೇಲೆ ಇತರ ಸಮುದಾಯಗಳನ್ನು ಪರಸ್ಪರ ಎತ್ತಿ ಕಟ್ಟುವ ಕೆಲಸವನ್ನು ಪ್ರಭಾಕರ್ ಭಟ್ ಮಾಡಿದ್ದಾರೆ ಎಂದು ಸಲಿಕತ್ ಎಂ.ಇ ದೂರಿನಲ್ಲಿ ಆರೋಪಿಸಿದ್ದಾರೆ.
ನಗರ ಠಾಣೆಯಲ್ಲಿ ದೂರು ಸಲ್ಲಿಸುವ ಸಂದರ್ಭ ಮಡಿಕೇರಿ ನಗರಸಭಾ ಸದಸ್ಯರಾದ ಮೇರಿ ವೇಗಸ್, ನೀಮಾ ಹ?ರ್ದ್ ಹಾಗೂ ಜಿಲ್ಲಾ ಸಮಿತಿ ಸದಸ್ಯೆ ತಾಹಿರಾ ಇಬ್ರಾಹಿಂ ಹಾಜರಿದ್ದರು.