

ವಿಜಯಪುರ: ವೃತ್ತಿ ಪಾವಿತ್ರೃತೆ ಕಾಯ್ದುಕೊಳ್ಳಬೇಕಾದ ಶಿಕ್ಷಕರೇ ಸರ್ಕಾರಿ ನಿಯಮಾವಳಿ ಉಲ್ಲಂಘಿಸಿ ಭೂ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಈಗಾಗಲೇ ಸಲ್ಲಿಕೆಯಾದ ದೂರು ಆಧರಿಸಿ ಲೋಕಾಯುಕ್ತರು ತನಿಖೆ ಚುರುಕುಗೊಳಿಸಬೇಕೆಂದು ಯುವ ಪರಿಷತ್ ಜಿಲ್ಲಾಧ್ಯಕ್ಷ ಶರಣು ಸಬರದ ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ವೃಕ್ಷ, ನೀರು, ಶಿಕ್ಷಣ ಎಂಬ ಘೋಷ ವಾಕ್ಯದಡಿ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿದ್ದಾರೆ. ಆದರೆ, ಸಚಿವರ ಸುತ್ತಮುತ್ತ ಇರುವ ಕೆಲವು ಶಿಕ್ಷಕರು ಟಾರ್ಚ್ ಬಟ್ಟೆ ಹಾಕಿಕೊಂಡು ಬಡ ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಭೂ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಸಚಿವರ ಆಶಯಕ್ಕೆ ಧಕ್ಕೆಯಾಗುತ್ತಿದೆಯಲ್ಲದೇ ಬಡ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೂ ಹೊಡೆತ ಬೀಳುತ್ತಿದೆ. ಸಚಿವರು ಅವರನ್ನು ಹೊಡೆದೋಡಿಸಿ ಪಾಠ ಮಾಡಲು ಹಚ್ಚಬೇಕು. ಸಂಬಂಧಿಸಿದ ಅಧಿಕಾರಿಗಳು ಮತ್ತು ಲೋಕಾಯುಕ್ತರು ಸಹ ಕ್ರಮ ಕೈಗೊಳ್ಳಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೆ ಪ್ಲಾಟ್‌ಗಳನ್ನು ಮಾರಾಟ ಮಾಡುವ ಕರಪತ್ರ ಹಂಚಿಕೊಳ್ಳುತ್ತಾ, ಶಿಕ್ಷಕರಿಂದ ಹಣ ಪಡೆಯುತ್ತಾ ದಲ್ಲಾಳಿತನ ಮಾಡುತ್ತಿರುವ ನೌಕರರ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ. ನಗರ ಹೊರವಲಯದಲ್ಲಿ ಫಾರ್ ಟೀಚರ್ಸ್ ಮತ್ತು ಗವರ್ನಾಮೆಂಟ್ ಎಂಪ್ಲಾಯ್ಸಾ ಹೆಸರಲ್ಲಿ ಲೇಔಟ್ ನಿರ್ಮಿಸಿ ಪುತ್ರರು ಹಾಗೂ ಸಂಬಂಧಿಸಿದವರ ಹೆಸರಲ್ಲಿ ದಂಧೆ ನಡೆಸಲಾಗುತ್ತಿದೆ. ಶಿಕ್ಷಕರಾದ ಅರ್ಜುನ ಲಮಾಣಿ, ಹಣಮಂತ ಕೊಣದಿ ಹಾಗೂ ರವಿ ಹೂಗಾರ ಮೇಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿಗೆ ದೂರು ಸಲ್ಲಿಸಲಾಗಿದೆ. ಉಪ ಲೋಕಾಯುಕ್ತರು ತನಿಖೆಗಾಗಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ. ಈವರೆಗೆ ತನಿಖೆ ಎಲ್ಲಿಗೆ ಬಂದಿದೆ ಎಂಬುದು ಬಹಿರಂಗಗೊಂಡಿಲ್ಲ. ಹೀಗಾಗಿ ತ್ವರಿತವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಬರದ ಒತ್ತಾಯಿಸಿದರು.
ಪೂಜ್ಯ ಸಿದ್ಧೇಶ್ವರ ಶ್ರೀಗಳ ಫೋಟೊ ಬಳಸಿಕೊಂಡು ‘ನಾಡು ಕಂಡ ಶ್ರೇಷ್ಠ ಸಂತ ಪರಮ ಪೂಜ್ಯ ಸಿದ್ಧೇಶ್ವರ ಅಪ್ಪಾಜಿಯವರು ವಾಯು ವಿಹಾರ ಮಾಡಿದ ಪುಣ್ಯ ಸ್ಥಳದಲ್ಲಿ ಚಾಣಕ್ಯ ಕಾಲನಿ ನಿವೇಶನಗಳು ರಿಯಾಯಿತಿ ದರದಲ್ಲಿ ಹಾಗೂ ಸುಲಭ ಕಂತುಗಳಲ್ಲಿ ಲಭ್ಯ’ ಎಂಬ ಘೋಷ ವಾಕ್ಯ ಬಳಸಿದ ಕರಪತ್ರ ಪ್ರದರ್ಶಿಸಿದ ಸಬರದ, ಘನತೆ ಮರೆತು ದಂಧೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರ ಈ ನಡೆ ಖಂಡನೀಯ. ಅನೇಕ ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಅವರಿಗೆಲ್ಲ ಹಣೆ ಮಡಿದು ನಮಸ್ಕರಿಸುತ್ತೇನೆ. ಆದರೆ, ಇಂಥ ಶಿಕ್ಷಕರಿಂದ ಯಾವ ಮೌಲ್ಯ ನಿರೀಕ್ಷಿಸಲು ಸಾಧ್ಯ. ಹೀಗಾಗಿ ಸಚಿವ ಎಂ.ಬಿ. ಪಾಟೀಲರು ಇಂಥವರ ಮೇಲೆ ಕ್ರಮ ವಹಿಸಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.