ಮೈಸೂರು: ನಿಯಮ ಬಾಹಿರವಾಗಿ ಸಾರ್ವಜನಿಕ ಉದ್ದೇಶಿತ(ಸಿಎ) ನಿವೇಶನ ಪಡೆದಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ನಾಗೇಂದ್ರ ಅವರು ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಇದಕ್ಕೆ ಸಂಬಂಧಪಟ್ಟ ದಾಖಲೆ ಸಲ್ಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.
ಮೈಸೂರು ತಾಲೂಕು ಕೇರ್ಗಳ್ಳಿ ಸರ್ವೇ ನಂ. 27, 29ರಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ನಿರ್ಮಿಸಿರುವ ಸೋಮನಾಥನಗರ ಬಡಾವಣೆಯಲ್ಲಿನ ಸಿ.ಎ. ನಿವೇಶನ ಇದಾಗಿದೆ. ರಘು ಕೌಟಿಲ್ಯ ಅವರು, ವ್ಯವಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಜೆ. ರಂಗಣ್ಣ ಲಕ್ಷ್ಮಮ್ಮ ಚಾರಿಟಬಲ್ ಟ್ರಸ್ಟ್‌ಗೆ ನಿಯಮಬಾಹಿರವಾಗಿ 85 (62+67)/2 (5,482.5 ಚ.ಮೀ.) ನಿವೇಶನವನ್ನು ನೀಡಲಾಗಿದೆ ಎಂದು ದೂರಿದ್ದಾರೆ.
ನಿವೇಶನಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತಾರದೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಂಡಿಸದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಸಿಬ್ಬಂದಿ ಸೇರಿ ಕಾನೂನುಬಾಹಿರವಾಗಿ ನಿವೇಶನ ಮಂಜೂರು ಮಾಡಿದ್ದಾರೆ. ಹೀಗಾಗಿ ಅಕ್ರಮವಾಗಿ ನಿವೇಶನ ಪಡೆದಿರುವ ರಘು ಕೌಟಿಲ್ಯ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ವ್ಯವಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ, ಖಾಸಗಿ ವ್ಯಕ್ತಿ ಆರ್.ರಘು ಕೌಟಿಲ್ಯ ಅಕ್ರಮ ಆರ್ಥಿಕ ಲಾಭ ಮಾಡಿಕೊಡುವ ಉದ್ದೇಶದಿಂದ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಿ.ಎ. ನಿವೇಶನವನ್ನು ಗುತ್ತಿಗೆ ಒಪ್ಪಂದ ಪತ್ರ ಮಾಡಿಕೊಟ್ಟು ಸಹಕರಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ರಾಜಶೇಖರ್, ನಗರ ಯೋಜನಾ ಸಹಾಯಕ ನಿರ್ದೇಶಕ ಪಿ.ಎಸ್.ನಟರಾಜ್, ಅಂದಿನ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಮತ್ತು ಜಿ.ಡಿ.ದಿನೇಶ್ ಕುಮಾರ್, ಹಿಂದಿನ ಕಾರ್ಯದರ್ಶಿ ಕುಸುಮಾ ಕುಮಾರಿ, ತಹಸೀಲ್ದಾರ್ ರಮಾದೇವಿ ಅಲ್ಲದೆ ಉಪ ನೋಂದಣಾಧಿಕಾರಿ, ಸಹಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ನಿಯಮ ಬಾಹಿರವಾಗಿ ಮಂಜೂರು ಮಾಡಿರುವ ಈ ಸಿ.ಎ. ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.