

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬವು ತಮ್ಮ ರಾಜಕೀಯ ಹಾಗೂ ಅಧಿಕಾರ ಪ್ರಭಾವ ಬಳಸಿಕೊಂಡು ಬಿಡಿಎ ಹಾಗೂ ಕೆಐಎಡಿಬಿಯಿಂದ ಕೋಟ್ಯಂತರ ರೂ. ಮೊತ್ತದ ಸಿ.ಎ ನಿವೇಶನವನ್ನು ಹಂಚಿಕೆ ಪಡೆಯಲು ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇದರಿಂದ 240 ಕೋಟಿ ರೂ. ಮೊತ್ತದ ಸರ್ಕಾರಿ ಸ್ವತ್ತಬನ್ನು ಸ್ವಂತಕ್ಕೆ ಬಳಸಿಕೊಂಡಿದ್ದು, ಇದರ ವಿರುದ್ಧ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಬಿಡಿಎ ಹಾಗೂ ಕೆಐಎಡಿಬಿ ಸಂಸ್ಥೆಗಳಿಂದ ಸಿ.ಎ. ನಿವೇಶನವನ್ನು ಕಾನೂನುಬಾಹಿರವಾಗಿ ಪಡೆದಿರುವ ಕುರಿತು 300ಕ್ಕೂ ಹೆಚ್ಚು ಪುಟಗಳುಳ್ಳ ದಾಖಲೆಯನ್ನು ಲೋಕಾಯುಕ್ತಕ್ಕೆ ಶುಕ್ರವಾರ ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ಆರ್.ರಮೇಶ್, ಮಲ್ಲಿಕಾರ್ಜುನ ಖರ್ಗೆ ಕುಟುಂಬವು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡೇ ಕೋಟ್ಯಂತರ ರೂ. ಮೊತ್ತದ ಸ್ವತ್ತನ್ನು ಸ್ವಂತಕ್ಕೆ ಬಳಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಶಯಕ್ಷಣಿಕ ಉದ್ದೇಶಕ್ಕಾಗಿ ರಚಿಸಿದ್ದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ಮಾರುತಿ ರಾವ್ ಡಿ. ಮಾಲೆ ಮುನ್ನಡೆಸುತ್ತಿದ್ದರು. ಅವರ ನಿಧನದ ನಂತರ ಖರ್ಗೆ ಕುಟುಂಬವು ತನ್ನೆಲ್ಲ ಸದಸ್ಯರಿಗೆ ಟ್ರಸ್ಟಿಗಳನ್ನಾಗಿ ಮಾಡಿ ಇಡೀ ಆಸ್ತಿಯನ್ನು ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ. ಬಿಡಿಎನಿಂದ 2014ರಲ್ಲಿ ಬಿಟಿಎಂ 4ನೇ ಹಂತದಲ್ಲಿ 8,002 ಚದರ ಮೀ. (86,133 ಚ. ಅಡಿ) ವಿಸ್ತೀರ್ಣದ ಸಿ.ಎ ನಿವೇಶನವನ್ನು ಶೈಕ್ಷಣಿಕ ಉದ್ದೇಶಕ್ಕೆಂದು 30 ವರ್ಷಕ್ಕೆ ಗುತ್ತಿಗೆಗೆ ಪಡೆಯಲಾಯಿತು. ಈ ವಿಷಯವನ್ನು ಮರೆಮಾಚಿ ಕೆಐಎಡಿಬಿಯಿಂದ ಏರ್‌ಪೋರ್ಟ್ ಬಳಿಯ ರಕ್ಷಣಾ-ವೈಮಾನಿಕ ಪಾರ್ಕ್‌ನಲ್ಲಿ 5 ಎಕರೆ ವಿಸ್ತೀರ್ಣದ ಕೈಗಾರಿಕೆ ನಿವೇಶನವನ್ನು ಮಂಜೂರು ಮಾಡಿಸಿಕೊಂಡಿದೆ. ಅರ್ಜಿ ಹಾಕಿದ ಮೂರೇ ತಿಂಗಳಲ್ಲಿ ನಿವೇಶನ ಹಂಚಿಕೆ ಪಡೆದುಕೊಂಡಿದೆ. ಅನ್ಯರು ಹಲವು ವರ್ಷಗಳಿಂದ ಮಂಜೂರಾತಿಗೆ ಕಾಯುತ್ತಿರುವಾಗ ಖರ್ಗೆ ಕುಟುಂಬಕ್ಕೆ ಯಾವ ಶಿಫಾರಸು ಆಧರಿಸಿ ಹಂಚಿಕೆ ಮಾಡಲಾಯಿತು ಎಂದು ಪ್ರಶ್ನಿಸಿದರು.