ಜಲಮಂಡಳಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

vijayavani logo
Award ceremony, official ceremony tomorrow
Published on

ಬೆಂಗಳೂರು: ಮಹಾನಗರದಲ್ಲಿರುವ ಅನಧಿಕೃತ ಕಟ್ಟಡಗಳಿಗೆ ನೀರು ಹಾಗೂ ಒಳಚರಂಡಿ ಸೌಲಭ್ಯ ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ಪಾಲಿಸದ ಜಲಮಂಡಳಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಾಹಿತಿಹಕ್ಕು ಅಧ್ಯಯನ ಕೇಂದ್ರವು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.

ಯಾವುದೇ ಕಟ್ಟಡಗಳು ಆರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಹೊಂದಿರಬೇಕು. ಇಂತಹ ಕಟ್ಟಡಗಳು ಪ್ರಮಾನಪತ್ರವಿಲ್ಲದೆ ನಿರ್ಮಾಣವಾಗುತ್ತಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ನಿಯಮದಂತೆ ಕ್ರಮ ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಕಳೆದ ಡಿ.17ರಂದು ಆದೇಶ ಮಾಡಿತ್ತು. ಇದನ್ನಾಧರಿಸಿ ಬಿಬಿಎಂಪಿ ಹಾಗೂ ಬೆಸ್ಕಾಂ ತನ್ನ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ವೇಳೆ ಸಂಬಂಧಿಸಿದ ಪ್ರಮಾಣಪತ್ರ ಪಡೆಯದಿದ್ದಲ್ಲಿ ಸೌಲಭ್ಯ ಸ್ಥಗಿತಗೊಳಿಸುವುದಾಗಿ ಆಂತರಿಕ ಆದೇಶವನ್ನು ಹೊರಡಿಸಿದೆ. ಆದರೆ, ಜಲಮಂಡಳಿ ಈವರೆಗೂ ಇಂತಹ ಆದೇಶ ಹೊರಡಿಸಿಲ್ಲ. ಇದು ನ್ಯಾಯಾಂಗ ನಿಂದನೆಗೂ ಎಡೆಮಾಡಿಕೊಡಲಿದೆ ಎಂದು ಕೇಂದ್ರದ ಪದಾಧಿಕಾರಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸುಪ್ರೀಂ ಆದೇಶ ಪಾಲಿಸದ ಕಾರಣ ನಿಯಮ ಉಲ್ಲಂಸಿ ಸೌಲಭ್ಯ ಒದಗಿಸಿರುವ ಎಲ್ಲ ಪ್ರಕರಣಗಳನ್ನು ಮರುಪರಿಶೀಲಿಸಬೇಕು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಪ್ರತ್ಯೇಕ ದೂರು ಸಲ್ಲಿಸಲಾಗಿದೆ ಎಂದು ಕೇಂದ್ರದ ಪದಾಧಿಕಾರಿ ಬಿ.ಎಚ್.ವೀರೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net