

ಕುಂದಾಪುರ: ಕಳ್ಳರಿಂದ ರಕ್ಷಣೆ ಪಡೆಯಲು ‘ಸಿಗಂಧೂರು ಶ್ರೀ ಚೌಡೇಶ್ವರಿ ಕಣ್ಗಾವಲು ಇದೆ’ ಎಂದು ಮನೆ- ಕಟ್ಟಡಗಳಿಗೆ ನಾಮಫಲಕದ ಮೂಲಕ ರಕ್ಷಣೆ ಪಡೆಯುವುದು ಸಾಮಾನ್ಯ. ಆದರೆ ತಾಲೂಕಿನ ಬೀಜಾಡಿಯ ನಾಗರಿಕರು ತ್ಯಾಜ್ಯ ಉಪಟಳದಿಂದ ಬೇಸತ್ತು ‘ತ್ಯಾಜ್ಯ ಎಸೆದರೆ ದೇವರಿಗೆ ಹುಯಿಲು ಕೊಡುವ’ ಎಚ್ಚರಿಕೆ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕುಂದಾಪುರ ತಾಲೂಕು ಬೀಜಾಡಿ ಗ್ರಾಮ ಬೆಳ್ಳಂಕಿ ನಿತ್ಯಹರಿದ್ವರ್ಣದ ಹಾಡಿಯಲ್ಲಿ ಶ್ರೀಮಂತ ಜನ ವಾಹನದಲ್ಲಿ ಬಂದು ತಮ್ಮ ಮನೆಯ ತ್ಯಾಜ್ಯ ಸುರಿದು ಪರಿಸರ, ದೇವಸ್ಥಾನ ಸರಹದ್ದನ್ನು ತ್ಯಾಜ್ಯ ಕೊಂಪೆ ಮಾಡುತ್ತಿದ್ದಾರೆ. ಇದರಿಂದ ಬೇಸತ್ತ ಬೆಳ್ಳಂಕಿ ವಾಸಿಗಳು ತ್ಯಾಜ್ಯ ಸುರಿಯುವವರ ವಿರುದ್ಧ ಹುಯಿಲು ಕೊಡಲಾಗುತ್ತದೆ ಎಂಬ ನಾಮಫಲಕ ಹಾಕಿ ತ್ಯಾಜ್ಯದಿಂದ ಮುಕ್ತಿ ಪಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕೋಡಿ- ಬೀಜಾಡಿ ಮೂಲಕ ರಾಷ್ಟ್ರೀಯ ಹೆದ್ದಾರಿ-66 ಸಂಪರ್ಕಿಸುವ ಕೂಡುರಸ್ತೆ ಬೆಳ್ಳಂಕಿ ಸಪರಿವಾರ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿ ಹಸಿರಿಂದ ಕೂಡಿದ್ದು, ಸುತ್ತಮುತ್ತ ನೂರಾರು ಮನೆಗಳಿವೆ. ಕೋಡಿ ಸಮುದ್ರ ತೀರ ಪ್ರವಾಸಕ್ಕೆ ಬಂದವರೂ ಕಸ ಬಿಸಾಕಿ ಹೋಗುತ್ತಿದ್ದಾರೆ. ಪ್ಲಾಸ್ಟಿಕ್ ಚೀಲ, ಕೊಳೆತ ತ್ಯಾಜ್ಯ ಪರಿಸರದಲ್ಲಿ ಅಸಹ್ಯ ವಾಸನೆಗೂ ಕಾರಣ. ಜಾನುವಾರುಗಳು ಪ್ಲಾಸ್ಟಿಕ್ ತಿಂದು ಅಸು ನೀಗಿದ್ದೂ ಇದೆ. ಪ್ರತಿದಿನ ನಾಯಿಗಳು ತ್ಯಾಜ್ಯಕ್ಕಾಗಿ ಕಿತ್ತಾಟ ನಡೆಸುತ್ತವೆ. ಪಕ್ಷಿಗಳ ಮೇಲೂ ತ್ಯಾಜ್ಯ ಪರಿಣಾಮ ಬೀರುತ್ತಿದೆ.
ತ್ಯಾಜ್ಯ ಸುರಿಯುವುದು ತಡೆಯಲು ಪರಿಸರದ ಜನರು ಕಾವಲು ಕಾದರೂ ಪ್ರಯೋಜನವಾಗಲಿಲ್ಲ. ಬೇಸತ್ತ ಸ್ಥಳೀಯ ನಿವಾಸಿಗಳು ಬೆಳ್ಳಂಕಿ ಸಪರಿವಾರ ಶ್ರೀ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಕಸ ಹಾಕುವವರ ನೀನೇ ದಂಡಿಸಬೇಕೆಂದು ಪ್ರಾರ್ಥಿಸಿದ್ದಾರೆ.
ಕಾರಣಿಕದ ದೇವರು: ಬೀಜಾಡಿ ಗ್ರಾಮ ಬೆಳ್ಳಂಕಿ ಸಪರಿವಾರ ಶ್ರೀ ನಾಗಬ್ರಹ್ಮಲಿಂಗೇಶ್ವರ ದೈವಸ್ಥಾನಕ್ಕೆ ಶತಮಾನದ ಇತಿಹಾಸವಿದೆ. ಬ್ರಹ್ಮಲಿಂಗ, ನಾಗ ಅಲ್ಲದೆ ಹಲವಾರು ದೈವಗಳ ಸಾನ್ನಿಧ್ಯ ಇಲ್ಲಿದೆ. ಜನ, ಜಾನುವಾರು ಕಾಣೆಯಾದರೆ, ಜ್ವರ ಬಂದರೆ, ಮಕ್ಕಳು ಹಾಗೂ ಜಾನುವಾರುಗಳಿಗೆ ಸಮಸ್ಯೆ ಆದರೆ ದೇವರಿಗೆ ಹರಕೆ ಹೊತ್ತರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ನಂಬಿಕೆ. ಕಸ ಹಾಕುವವರು ಯಾರೇ ಆಗಲಿ, ಶಿಕ್ಷೆ ಕೊಡುವಂತೆ ಬೇಡಿಕೊಂಡರೆ ಖಂಡಿತ ಶಿಕ್ಷೆ ಕೊಡುತ್ತಾನೆ ಎನ್ನುವ ನಂಬಿಕೆಯೇ ಫಲಕ ಹಾಕಲು ಕಾರಣ.
ಎಲ್ಲೆಲ್ಲಿಂದಲೂ ವಾಹನದಲ್ಲಿ ತ್ಯಾಜ್ಯ ತಂದು ಸುರಿದು ಹೋಗುವುದರಿಂದ ಸುಂದರ ಹಾಡಿ ಪರಿಸರ ಗಬ್ಬೆದ್ದು ಹೋಗಿತ್ತು. ಪರಿಸರದ ಯುವಕರು, ಸ್ಥಳೀಯರು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿದ್ದಾರೆ. ತ್ಯಾಜ್ಯ ಹಾಕಿದರೆ ಹುಯಿಲು ಕೊಡಲಾಗುತ್ತದೆ ಎನ್ನುವ ನಾಮಫಲಕದ ಮೂಲಕ ಎಚ್ಚರಿಸಿದ್ದಾರೆ. ತ್ಯಾಜ್ಯ ಸುರಿಯುವವರು ದೇವರಿಗಾದರೂ ಹೆದರುತ್ತಾರಾ ಎನ್ನುವುದನ್ನು ನೋಡಬೇಕು. ನಾಗಬ್ರಹ್ಮಲಿಂಗ ದೇವರಿಗೆ ಹೊಯಿಲು ಕೊಟ್ಟರೆ ಪರಿಣಾಮ ಆಗಿಯೇ ಆಗುತ್ತದೆ. ವಾದಿರಾಜ ಹೆಬ್ಬಾರ್, ಬೀಜಾಡಿ ಗ್ರಾಪಂ ಸದಸ್ಯ